ಬೆಂಗಳೂರು: ಕೊರೊನಾ ವೈರಸ್ ಕುರಿತಾದ ವದಂತಿಗಳನ್ನು ಸೃಷ್ಟಿಸಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಸರ್ಕಾರ ವೈಜ್ಞಾನಿಕವಾಗಿ ಇಂತಹ ವದಂತಿಗಳ ಮೇಲೆ ನಿಗಾ ಇಡುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೋ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಏನಾದರೂ ನಡೆದರೆ ಅದನ್ನು ನಮಗೆ ತಿಳಿಸಿ ನಾವು ನಿರ್ವಹಿಸುತ್ತೇವೆ ಎಂದಿದ್ದಾರೆ.
ಸಾರ್ವಜನಿಕರು ಆದಷ್ಟು ಒಳ್ಳೆಯ ಮಾಹಿತಿ ಹರಡಬೇಕು. ಸುಳ್ಳು ಸುದ್ದಿ ಹರಡಬೇಡಿ. ಇದು ನನ್ನ ಕಳಕಳಿಯ ಮನವಿ ಎಂದಿದ್ದಾರೆ. ಪೊಲೀಸರು ಇತ್ತೀಚೆಗೆ ಕೆಲವರು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದನ್ನು ಗಮನಿಸಿದ್ದಾರೆ. ಲಾಕ್ಡೌನ್ ಉಲ್ಲಂಘಿಸುವವರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕೆಲವರು ನಾನು ರಿಯಲ್ ಎಸ್ಟೇಟ್ ಉದ್ಯಮಿಯೆಂದು ಮತ್ತೆ ಕೆಲವರು ಗಣ್ಯನ ಸಂಬಂಧಿಯೆಂದು ಹೇಳುತ್ತಾರೆ. ಇದನ್ನು ಮಾಡಬೇಡಿ, ಇದು ನಿಮ್ಮ ಅಂತಸ್ತುಗಳನ್ನು ಹೇಳಿಕೊಳ್ಳಲು ಇದು ಸರಿಯಾದ ಸಮಯವಲ್ಲ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಅತಿಥಿ ಗೃಹಗಳಲ್ಲಿ ವಾಸಿಸುವ ನಿವಾಸಿಗಳ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಿನ ಸೌಲಭ್ಯಗಳು ಅತಿಥಿಗಳಿಗೆ ಕಷ್ಟಕರವಾಗಿರಬಾರದೆಂದು ಅತಿಥಿ ಗೃಹಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಹಲವು ಅತಿಥಿಗಳಿಂದ ಈಗಾಗಲೇ ಅಲ್ಲಿ ನೀಡುತ್ತಿರುವ ಆಹಾರದ ಬಗ್ಗೆ ದೂರುಗಳು ಬಂದಿದ್ದು, ಮಾಲೀಕರು ಕಾನೂನು ಕ್ರಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.