ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣವೇ ಇಲ್ಲ. ಅದರಲ್ಲೂ ಮೊಬೈಲ್ ಕಳ್ಳತನ ಪ್ರಕರಣಗಳಂತೂ ಪೊಲೀಸರಿಗೆ ನಿತ್ಯ ತಲೆನೋವು. ಅಂತೆಯೇ ಮೊಬೈಲ್ ಕಳ್ಳತನ ಪ್ರಕರಣ ತಹಬದಿಗೆ ತರಲು ನಗರ ಪೊಲೀಸ್ ಇಲಾಖೆ ಮುಂದಾಗಿದೆ.
ಹೌದು, ದೆಹಲಿ ಹಾಗೂ ಮುಂಬೈಯಲ್ಲಿ ಜಾರಿಯಲ್ಲಿರುವ ಕೇಂದ್ರ ನಿರ್ಮಿತ ಸಿಇಐಆರ್ ಅಪ್ಲಿಕೇಷನ್ ಜಾರಿಗೆ ತರಲು ನಗರ ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿದೆ. ಸದ್ಯ ನಗರದಲ್ಲಿ ಈ ಯೋಜನೆ ಪ್ರಾಯೋಗಿಕ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ರಾಜ್ಯದೆಲ್ಲೆಡೆ ಅನುಷ್ಠಾನಕ್ಕೆ ಬರಲಿದೆ. ಇದರಿಂದ ಮೊಬೈಲ್ ಕಳ್ಳತನ ಪ್ರಕರಣಗಳನ್ನು ತಡೆಯಬಹುದಾಗಿದೆ.
ಮೊಬೈಲ್ ಕಳ್ಳತನಕ್ಕೆ ಬೆಂಗಳೂರು ಪೊಲೀಸರಿಂದ ಬ್ರೇಕ್: ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆ್ಯಪ್ (ಸಿಇಐಆರ್) ಈಗಾಗಲೇ ದೆಹಲಿ ಹಾಗೂ ಮುಂಬೈನಲ್ಲಿ ಜಾರಿಯಲ್ಲಿದೆ. ಈ ಅಪ್ಲಿಕೇಷನ್ ಜಾರಿಯಾದರೆ ಮೂರನೇ ನಗರ ಬೆಂಗಳೂರು ಆಗಲಿದೆ. ಮೊಬೈಲ್ ಕಳ್ಳತನವಾದ ಬಳಿಕ ಇ-ಲಾಸ್ಟ್ ಆ್ಯಪ್ ಮೂಲಕ ದೂರು ದಾಖಲಿಸಬೇಕು. ದೂರು ದಾಖಲಾದ ಬಳಿಕ ನೇರವಾಗಿ ಸಿಇಐಆರ್ ಆ್ಯಪ್ಗೆ ರವಾನೆಯಾಗುತ್ತದೆ. ಸಿಇಐಆರ್ ಅಪ್ಲಿಕೇಷನ್ನಲ್ಲಿ ಮೊಬೈಲ್ ನಂಬರ್ ಹಾಗೂ ಐಎಂಇಐ ನಂಬರ್ ಹಾಕಿದ್ರೆ ಮೊಬೈಲ್ ಆ್ಯಕ್ಟಿವೇಷನ್ ಸಂಪೂರ್ಣ ಬ್ಲಾಕ್ ಆಗಲಿದೆ. ಖದೀಮರು ಮೊಬೈಲ್ ಕದ್ದರೂ ಬಳಸಲು ಸಾಧ್ಯವಿಲ್ಲದಂತಾಗುತ್ತದೆ. ಆ ಮೂಲಕ ಮೊಬೈಲ್ ಕಳ್ಳತನಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರು ಮುಂದಾಗಿದ್ದಾರೆ.
(ಇದನ್ನೂ ಓದಿ: ಬೆಂಗಳೂರಲ್ಲಿ ಪ್ರವಾಹ ಬಂದ ಮನೆಗೆ ನುಗ್ಗಿದ ಕಳ್ಳರು.. ನಗದು-ಆಭರಣ ದೋಚಿ ಪರಾರಿ)