ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ 2 ಕೋಟಿ ರೂಪಾಯಿ ಕಳ್ಳತನ ಪ್ರಕರಣವು ಭಾರಿ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕೋಟಿ ಕೋಟಿ ಹಣದ ಮೂಲ ಯಾವುದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಮತ್ತೊಂದೆಡೆ ಪ್ರಮುಖ ಆರೋಪಿಯು ಇಬ್ಬರು ಹೆಂಡತಿಯರ ಮುದ್ದಿನ ಗಂಡ ಎಂಬುದು ಕಳ್ಳತನದ ಬಳಿಕ ರಿವೀಲ್ ಆಗಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ 1.76 ಕೋಟಿ ಹಣ ಹಾಗೂ ಚಿನ್ನದ ಒಡವೆಯೊಂದಿಗೆ ಸುನೀಲ್ ಹಾಗೂ ದಿಲೀಪ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮನೆಯ ಯಜಮಾನ ಸಂದೀಪ್ ಲಾಲ್ ಇಷ್ಟು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು ಯಾಕೆ? ಇಷ್ಟು ಹಣದ ಮೂಲ ಯಾವುದು? ಎಂಬ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಎಫ್ಐಆರ್ನಲ್ಲಿ ಕೂಡ ಕಳ್ಳತನವಾದ ಹಣ ಎಷ್ಟು ಎಂಬ ಬಗ್ಗೆ ನಮೂದು ಮಾಡಿಲ್ಲ. ಅದೂ ಕೂಡ ಯಾಕೆಂಬ ಪ್ರಶ್ನೆ ಹುಟ್ಟುಹಾಕಿದೆ.
ಸಂದೀಪ್ ಲಾಲ್ ಹೇಳುವ ಪ್ರಕಾರ, ಮಧ್ಯಪ್ರದೇಶದಲ್ಲಿ ಜಮೀನು ಮಾರಾಟ ಮಾಡಿದ್ದ ಹಣದ ಜೊತೆಗೆ ಬೆಂಗಳೂರಿನಲ್ಲಿದ್ದ ಒಂದು ಮನೆಯನ್ನು 10 ಲಕ್ಷಕ್ಕೆ ಲೀಸ್ಗೆ ನೀಡಿದ್ದರು. ಆ ಹಣವನ್ನೆಲ್ಲ ಮನೆಯಲ್ಲೇ ಇಟ್ಟಿದ್ದೆವು ಎನ್ನುತ್ತಾರೆ. ಆದರೆ ಇದ್ಯಾವುದಕ್ಕೂ ಕೂಡ ದಾಖಲೆಗಳನ್ನು ಪೊಲೀಸರಿಗೆ ನೀಡಿಲ್ಲ. ಅಲ್ಲದೇ ಮನೆಯಲ್ಲಿ ಕಳ್ಳತನ ನಡೆದ ದಿನ ಸಂದೀಪ್ ಲಾಲ್ ಚೆನ್ನೈನಲ್ಲಿದ್ದ. ಹಾಗಾಗಿ ತಂದೆ ಮನಮೋಹನ್ ಲಾಲ್ ಮೂಲಕ ದೂರು ದಾಖಲು ಮಾಡಿಸಿದ್ದು, ಒಟ್ಟು ಲೆಕ್ಕ ನಮೂದಿಸದೇ ಕೇವಲ ನಗದು ಹಣ ಕಳುವಾಗಿದೆ ಎಂದಷ್ಟೇ ತಿಳಿಸಿದ್ದರಂತೆ.
ಆದರೆ, ನಂತರ ಮತ್ತೊಮ್ಮೆ ಬಂದು ಕಳ್ಳತನವಾದ ಹಣದ ವಿವರವನ್ನು ಕೆ.ಎಸ್.ಲೇಔಟ್ ಪೊಲೀಸರಿಗೆ ನೀಡಿದ್ದಾರಂತೆ. ಸದ್ಯ ವಶಕ್ಕೆ ಪಡೆದ 1.76 ಲಕ್ಷ ಹಣ ಹಾಗೂ 190 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಕೋರ್ಟ್ಗೆ ನೀಡಿದ್ದಾರೆ. ಹಣದ ಎಲ್ಲ ದಾಖಲೆಗಳನ್ನು ಸಂದೀಪ್ ಲಾಲ್ ನೀಡಲೇಬೇಕು, ಇಲ್ಲವಾದರೆ ಆ ಹಣ ಸರ್ಕಾರದ ಪಾಲಾಗಲಿದೆ. ಅಲ್ಲದೇ, ಐಟಿ ಇಲಾಖೆಯಿಂದಲೂ ನಿರಕ್ಷೇಪಣಾ ಪತ್ರ (ಎನ್ಓಸಿ) ಪಡೆದು ಹಣ ಬಿಡುಗಡೆ ಮಾಡಿಸಿಕೊಳ್ಳಬೇಕು.
ಇಬ್ಬರು ಹೆಂಡತಿಯರ ಮುದ್ದಿನ ಗಂಡ: ಪ್ರಕರಣದ ಮುಖ್ಯ ಆರೋಪಿ ಸುನೀಲ್ ಹಿನ್ನೆಲೆ ಸಾಮಾನ್ಯದ್ದಲ್ಲ. ಸುನೀಲ್ಗೆ ಲಕ್ಷ್ಮಿ ಮತ್ತು ಪುಷ್ಪ ಎಂಬ ಇಬ್ಬರು ಹೆಂಡತಿಯರಿದ್ದಾರೆ. ಮೊದಲ ಹೆಂಡತಿಯಿಂದ ದೂರ ಇದ್ದ ಈತನನ್ನು ಮೂರು ತಿಂಗಳ ಹಿಂದೆಯಷ್ಟೇ ಎರಡನೇ ಪತ್ನಿ ಪುಷ್ಪ ಜೈಲಿನಿಂದ ಬಿಡಿಸಿದ್ದಳು. ನಂತರ ಬೆಂಗಳೂರಿಗೆ ಬಂದು ದಂಪತಿ ನೆಲೆಸಿದ್ದರು. ಇಲ್ಲಿ ಆಟೋ ಓಡಿಸುತ್ತ, ಕಳ್ಳತನ ಮಾಡಿ ಜೈಲು ಪಾಲಾಗಿದ್ದಾನೆ.
ಇದನ್ನೂ ಓದಿ: 2 ಕೋಟಿ ರೂ. ಕದ್ದು ಗುಡ್ಡೆ ಮಾಂಸದ ರೀತಿ ಸಮನಾಗಿ ಹಣ ಹಂಚಿಕೊಂಡ ಖದೀಮರು ಅಂದರ್