ಬೆಂಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 99 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಬೈಕ್ ಸವಾರರನನ್ನು ನಗರದ ಮೈಕೊ ಲೇಔಟ್ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಂಚಾರ ನಿಯಮ ಇರುವುದೇ ಉಲ್ಲಂಘನೆ ಮಾಡುವುದಕ್ಕೆ ಎಂದು ಅಂದುಕೊಂಡಂತಿರುವ ಸೂಟ್ಕರ್ ಸವಾರ ನಗರದಲ್ಲಿ ಬರೋಬ್ಬರಿ 99 ಬಾರಿ ರಸ್ತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.
ದ್ವಿಚಕ್ರವಾಹನ ಸವಾರ ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಜಂಕ್ಷನ್ ಬಳಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದ. ಈ ದೃಶ್ಯ ಮುಂದಿನಿಂದ ಬರುತ್ತಿದ್ದ ಕಾರಿನ ಡ್ಯಾಷ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪೊಲೀಸ್ ಆ್ಯಪ್ನಲ್ಲಿ ಪರಿಶೀಲಿಸಿದಾಗ ಸವಾರ 99 ಬಾರಿ ಸಂಚಾರಿ ನಿಯಮ ಉಲ್ಲಂಘಿರುವುದು ಕಂಡುಬಂದಿತ್ತು.
ಈ ಸಂಬಂಧ ಮೈಕೊ ಲೇಔಟ್ ಸಂಚಾರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧಾರದ ಮೇರೆಗೆ ಸಂಚಾರಿ ಪೊಲೀಸರು ಬೈಕ್ ಸವಾರರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಸವಾರನು 99 ಪ್ರಕರಣಗಳಿಂದ ಸುಮಾರು 56 ಸಾವಿರ ರೂ. ದಂಡ ಪಾವತಿಸಬೇಕಿದ್ದು, ಈತನ ಡಿಎಲ್ ರದ್ದುಗೊಳಿಸಲು ಆರ್ಟಿಓಗೆ ಶಿಫಾರಸ್ಸು ಮಾಡಲಾಗಿದೆ. ಅಲ್ಲದೆ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು: 670 ಕೇಸ್ ದಾಖಲು, ₹3.36 ಲಕ್ಷ ದಂಡ ವಸೂಲಿ