ಬೆಂಗಳೂರು: ಹೆಂಡತಿ-ಮಕ್ಕಳನ್ನು ಕೊಂದು ಜೈಲಿನಲ್ಲಿದ್ದ ಆರೋಪಿ ಅನಾರೋಗ್ಯ ಕಾರಣದಿಂದ ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಪೊಲೀಸ್ ಸಿಬ್ಬಂದಿ ಮೇಲೆ ಖಾರದಪುರ ಎರಚಿ ಎಸ್ಕೇಪ್ ಆಗಿದ್ದ ಆರೋಪಿಯನ್ನ 11 ವರ್ಷಗಳ ಬಳಿಕ ಮತ್ತೆ ಬಂಧಿಸುವಲ್ಲಿ ವಿ.ವಿ. ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಿಯಾಣ ಮೂಲದ ಧರ್ಮಸಿಂಗ್ ಯಾದವ್ ಬಂಧಿತ ಆರೋಪಿಯಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಿಯುಸಿ ವ್ಯಾಸಂಗ ಮಾಡಿದ್ದ ಈತ ಇದೇ ಆಧಾರದ ಮೇಲೆ 1987ರಲ್ಲಿ ಏರ್ ಪೋರ್ಸ್ ನಲ್ಲಿ ಜವಾನನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಕೋಲ್ಕತ್ತಾ, ದೆಹಲಿ, ವಡೋದರ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೆಲಸ ಮಾಡಿ ಅಂತಿಮವಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ 2007ರಲ್ಲಿ ನಿವೃತ್ತಿಯಾಗಿದ್ದ. ದೆಹಲಿಯ ನಿವಾಸಿ ಅನು ಯಾದವ್ ಎಂಬುವರನ್ನು ವರಿಸಿದ್ದ. ಈತನಿಗೆ 14 ವರ್ಷದ ಗಂಡು ಹಾಗೂ 8 ವರ್ಷದ ಹೆಣ್ಣು ಮಕ್ಕಳಿದ್ದರು.
1999ರಿಂದಲೇ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ವಾಸ ಮಾಡುತ್ತಿದ್ದ. ನಿವೃತ್ತಿ ಬಳಿಕ ಜೀವನಕ್ಕಾಗಿ ಸಂಜಯನಗರದಲ್ಲಿ ಖಾಸಗಿ ಕಂಪನಿಯಲ್ಲಿ ಪರ್ಚೇಸಿಂಗ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಯುವತಿ ವ್ಯಾಮೋಹಕ್ಕೆ ಒಳಗಾದ ಆರೋಪಿ ವೈವಾಹಿಕ ಜಾಲತಾಣವಾದ ಶಾದಿ ಡಾಟ್ ಕಾಮ್ ನಲ್ಲಿ ಮದುವೆಯಾಗಿಲ್ಲ ಎಂದು ಬಿಂಬಿಸಿಕೊಂಡು ಅರ್ಜಿ ಹಾಕಿದ್ದ. ಈ ವೇಳೆ ಜಾಲತಾಣದಲ್ಲೇ ಅಂಜನಾ ಕುಮಾರಿಯನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ.
ಈಕೆಯೊಂದಿಗೆ ಮದುವೆಯಾಗಬೇಕೆಂದರೆ ತನ್ನ ಹೆಂಡತಿ-ಮಕ್ಕಳು ಅಡ್ಡಿಪಡಿಸುತ್ತಾರೆ ಎಂದು ಭಾವಿಸಿದ ಧರ್ಮಸಿಂಗ್, 2008ರಲ್ಲಿ ಮನೆಯಲ್ಲಿಯೇ ಮರದ ಕಟ್ಟಿಗೆಯಿಂದ ಹೆಂಡತಿ-ಮಕ್ಕಳನ್ನು ಹೊಡೆದಿದ್ದ. ಪೊಲೀಸರಿಗೆ ಅನುಮಾನ ಬಾರದಿರಲು ಚಾಕುವಿನಿಂದ ಕತ್ತು ಕೊಯ್ದು ಸಾಯಿಸಿದ್ದ. ಆಕೆಯ ಕತ್ತಿನಲ್ಲಿದ್ದ ಚಿನ್ನಾಭರಣ ತೆಗೆದಿರಿಸಿಕೊಂಡು ಪೊಲೀಸರ ಮುಂದೆ ಯಾರೋ ನನ್ನ ಹೆಂಡತಿ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ವಿದ್ಯಾರಣ್ಯಪುರ ಠಾಣೆಗೆ ಹೋಗಿ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯಲ್ಲಿ ಧರ್ಮಸಿಂಗ್ ಕೈವಾಡವಿರುವುದನ್ನು ಸಾಬೀತಾಗಿದ್ದರಿಂದ ಈತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಖಾರದಪುಡಿ ಎರಚಿ ಎಸ್ಕೇಪ್ ಆಗಿದ್ದ ಆರೋಪಿ :
ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸುತ್ತಿರುವಾಗಲೇ ತನಗೆ ಮೂತ್ರಕೋಶದಲ್ಲಿ ಸಮಸ್ಯೆಯಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಯುರಾಲಜಿ ವಿಭಾಗಕ್ಕೆ ದಾಖಲಾಗಿದ್ದ. ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೇಗಾದರೂ ಮಾಡಿ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದ. ಜೈಲಿನಿಂದ ಆಸ್ಪತ್ರೆಗೆ ಹೋಗುವಾಗಲೇ ಕಾರಾಗೃಹದ ಕ್ಯಾಂಟಿನ್ ನಿಂದಲೇ ಪೇಪರ್ ನಲ್ಲಿ ಖಾರದ ಪುಡಿ ತಂದು ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಮಯ ನೋಡಿಕೊಂಡು ಪೊಲೀಸರ ಮೇಲೆ ಖಾರದಪುಡಿ ಎರಚಿ ಸ್ಥಳದಿಂದ ತಪ್ಪಿಸಿಕೊಂಡಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
11 ವರ್ಷವಾದರೂ ನಾಪತ್ತೆಯಾದವನನ್ನ ಬಂಧಿಸದಿರುವ ಬಗ್ಗೆ ನ್ಯಾಯಾಲಯ ಚಾಟಿ ಬೀಸಿತ್ತು. ಇದರಿಂದ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಏರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದರೂ ಈತನಿಗೆ ಮಾಸಿಕ ಪಿಂಚಣಿ ಬರುತ್ತಿರುವುದನ್ನು ಅರಿತ ಪೊಲೀಸರು ಆತನ ಹಿನ್ನೆಲೆ-ಮೊಬೈಲ್ ನಂಬರ್ ಕಲೆ ಹಾಕಿದಾಗ ಹರಿಯಾಣದಲ್ಲಿರುವುದು ಗೊತ್ತಾಗಿತ್ತು.
ಇದರಂತೆ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಹರಿಯಾಣದ ಅತ್ತೇಲಿಮಂಡಿ ಟೌನ್ ನಲ್ಲಿ ಬೇರೊಬ್ಬರ ಹೆಸರಿನಲ್ಲಿ ಲಿಕ್ಕರ್ ಲೈಸನ್ಸ್ ಪಡೆದು ವೈನ್ ಶಾಪ್ ನಡೆಸುತ್ತಿದ್ದ. 2012ರಲ್ಲಿ ಅಸ್ಸೋಂ ಮೂಲದ ಶಿಪ್ರಾ ಎಂಬಾಕೆಯನ್ನು ವರಿಸಿದ್ದ. ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು 3 ಮಕ್ಕಳ ದಾರುಣ ಸಾವು: ಮುಗಿಲು ಮುಟ್ಟಿದ ಆಕ್ರಂದನ