ಬೆಂಗಳೂರು: ಆತ ನಟೋರಿಯಸ್ ಸರಗಳ್ಳ. 80ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ಈತ 2018ರಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ ಖಾಕಿ ಬುಲೆಟ್ ಈತನ ಕಾಲು ಸೀಳಿತ್ತು. ಇಷ್ಟಾದ್ರು ಆಸಾಮಿ ಚಾಳಿ ಬಿಟ್ಟಿರಲಿಲ್ಲ. ಮತ್ತೆ ಸರಗಳ್ಳತನ ಮಾಡಿ ಕಂಬಿ ಹಿಂದೆ ಸೇರಿದ್ದಾನೆ. ಅಚ್ಯುತ್ ಘನಿ ಬಂಧಿತ ಕುಖ್ಯಾತ ಸರಗಳ್ಳ.
ಈ ನಟೋರಿಯಸ್ ಅಂತಿಂಥವನಲ್ಲ. ಒಂದು ಕಾಲದಲ್ಲಿ ಈತನ ಅಟ್ಟಹಾಸಕ್ಕೆ ಬೆಂಗಳೂರು ಮಹಿಳೆಯರು ನಡುಗಿಹೋಗಿದ್ರು. ಕಪ್ಪು ಬಣ್ಣದ ಪಲ್ಸರ್ನಲ್ಲಿ ಬರ್ತಿದ್ದ ಆರೋಪಿ ಮಹಿಳೆಯರ ಸರ ಕಸಿದು ಎಸ್ಕೇಪ್ ಆಗಿದ್ದ. ರಾಜ್ಯಾದ್ಯಂತ ಈತನ ಮೇಲೆ ಸುಮಾರು 80ಕ್ಕೂ ಹೆಚ್ಚು ಪ್ರಕರಣಗಳಿವೆ. 2018ರ ಜೂನ್ ತಿಂಗಳಲ್ಲಿ ಕೆಂಗೇರಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಖದೀಮ. ಜೈಲಿಂದ ವಾಪಸ್ ಬಂದು ಸರಗಳ್ಳತನಕ್ಕೆ ಇಳಿದಿದ್ದ.
2018ರಲ್ಲಿ ಜೈಲು ಸೇರಿದ್ದ ಅಚ್ಯುತ್ ಕೆಲ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ. ಹೀಗೆ ಬಂದಿದ್ದ ಆರೋಪಿ ದಾವಣಗೆರೆ, ಗದಗ, ಬೆಂಗಳೂರಿನ ಸಿಕೆ ಅಚ್ಚುಕಟ್ಟು, ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ಹಲವೆಡೆ ಸರಗಳ್ಳತನ ಮಾಡಿದ್ದ. ಆರೋಪಿ ಪತ್ತೆಗೆ ಬೆಂಗಳೂರಿನ ಹಲವು ಠಾಣೆ ಪೊಲೀಸರು ಬಲೆ ಬೀಸಿದ್ದರು. ತಲೆ ಮರೆಸಿಕೊಂಡಿದ್ದ ಸರಗಳ್ಳನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 300 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದರು.
108 ಪ್ರಕರಣಗಳ ಆರೋಪಿ ಸಿಸಿಬಿಯ ವಶಕ್ಕೆ: ಬೆಂಗಳೂರು ನಗರದಲ್ಲಿ ಜನರಿಗೆ ಕೋಟಿಗಟ್ಟಲೆ ರೂಪಾಯಿ ವಂಚಿಸಿ, ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 108 ಕ್ರಿಮಿನಲ್ ಪ್ರಕರಣಗಳ ಆರೋಪಿಯನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಅಶ್ವಾಕ್ ಅಹಮದ್ ಬಂಧಿತ ಆರೋಪಿ.
2009-2010 ರಲ್ಲಿ ಗ್ರ್ಯಾನಿಟಿ ಪ್ರಾಪರ್ಟಿಸ್ ಹೆಸರಿನ ಸಂಸ್ಥೆ ತೆರೆದಿದ್ದ ಆರೋಪಿ ಅಶ್ವಾಕ್ ಅಹಮದ್, ಹೊಸಕೋಟೆ ಬಳಿ ಕೃಷಿ ಜಮೀನುಗಳನ್ನು ಅಕ್ರಮವಾಗಿ ರೆವಿನ್ಯೂ ನಿವೇಶನಗಳು ಎಂದು ಮೋಸದಿಂದ ಸಾರ್ವಜನಿಕರಿಗೆ ಮಾರಾಟ ಮಾಡಿದ್ದನು. ಆರೋಪಿಯ ವಿರುದ್ಧ ರಾಮಮೂರ್ತಿ ನಗರ, ಇಂದಿರಾ ನಗರ ಮತ್ತು ಆಶೋಕ ನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 108 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಮಂಗಳೂರಿನ ಮೋಸ್ಟ್ ವಾಟೆಂಡ್ ಆರೋಪಿಯ ಬಂಧನ: 23 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅಜರುದ್ದೀನ್ ಎಂಬಾತನನ್ನು ಸುರತ್ಕಲ್ ಪೊಲೀಸರು ಮಾರ್ಚ್ 23ರಂದು ಬಂಧಿಸಿದ್ದರು. ಸುರತ್ಕಲ್ನ ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ನಿವಾಸಿ ಅಜರುದ್ದೀನ್ ಯಾನೆ ಅಜರ್ ಯಾನೆ ನಾಥು (29) ಬಂಧಿತ. ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿದ್ದವು ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ವಿವರಿಸಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ 30 ವರ್ಷಗಳ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ