ಬೆಂಗಳೂರು: ಕೆಎಸ್ಆರ್‌ಟಿಸಿ ಪ್ರಥಮ ಅಂತರ-ನಗರ (Prototype ) ಎಲೆಕ್ಟ್ರಿಕ್ ಬಸ್ನ (EV Bus) ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿದ್ದು, ಜನವರಿ 16 ರಿಂದ ಬೆಂಗಳೂರು ಮೈಸೂರು ನಡುವೆ ಇ ಬಸ್ ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ. ಟಿಕೆಟ್ ದರವೂ ಕ್ಲಬ್ ಕ್ಲಾಸ್ ದರಕ್ಕಿಂತ ಕಡಿಮೆ ನಿಗದಿಪಡಿಸಲಾಗಿದೆ.
ಇಂದು ಇವಿ ಪವರ್ ಪ್ಲಸ್ ಬಸ್ ಪ್ರಾಯೋಗಿಕ ಚಾಲನೆ ಕೂಡ ಬೆಂಗಳೂರು - ರಾಮನಗರ ನಡುವೆ ನಡೆಸಲಾಯಿತು. ನಿರೀಕ್ಷೆಯಂತೆಯೇ ಎಲ್ಲಾ ತಪಾಸಣೆಯಲ್ಲಿಯೂ ಇ ಬಸ್ ಸಕಾರಾತ್ಮಕ ಫಲಿತಾಂಶ ನೀಡಿದ್ದು, ಸೋಮವಾರದಿಂದ ಬೆಂಗಳೂರು ಮೈಸೂರು ನಡುವೆ ಬಸ್ ಕಾರ್ಯಾಚರಣೆ ನಡೆಸಲಿದೆ. ಐರಾವತ ಕ್ಲಬ್ ಕ್ಲಾಸ್ ಪ್ರಯಾಣ ದರಕ್ಕಿಂತ ರೂ.30 ಕಡಿಮೆ ದರವನ್ನು ನಿಗದಿಪಡಿಸಲಾಗಿದೆ. ಮುಂದಿನ 49 ಬಸ್ಗಳು ಫೆಬ್ರವರಿ ಎರಡನೇ ವಾರದಲ್ಲಿ ಸೇರ್ಪಡೆಯಾಗಲಿದ್ದು, ಬೆಂಗಳೂರು ದಾವಣಗೆರೆ, ಬೆಂಗಳೂರು ಚಿಕ್ಕಮಗಳೂರು, ಬೆಂಗಳೂರು ಶಿವಮೊಗ್ಗ, ಬೆಂಗಳೂರು ಮಡಿಕೇರಿ, ಬೆಂಗಳೂರು ವಿರಾಜಪೇಟೆ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಗಳನ್ನು ಕಾರ್ಯಾಚರಣೆಗೊಳಿಸಲಿದೆ. ಸದ್ಯ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ಮುಕ್ತಾಯವಾಗಿದ್ದು, ಮೈಸೂರಿಗೆ ಮೊದಲ ಇ ಬಸ್ ಸೇವೆ ಒದಗಿಸಲಿದೆ.
ದರ ನಿಗದಿ: ಇ ಬಸ್ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಸ್ತುತ ಐರಾವತ ಬಸ್ ದರ 291 ರೂ. ಇದ್ದು ಐರಾವತ ಕ್ಲಬ್ ಕ್ಲಾಸ್ನಲ್ಲಿ 331 ರೂ. ಇದೆ .ಆದರೆ ಹೊಸದಾಗಿ ರಸ್ತೆಗಿಳಿಯುತ್ತಿರುವ ಇವಿ ಪವರ್ ಪ್ಲಸ್ ಬಸ್ ದರ 301 ರೂ. ಗಳಾಗಿದ್ದು, ಕ್ಲಬ್ ಕ್ಲಾಸ್ಗಿಂತ 30 ರೂ. ಕಡಿಮೆ ಇರಲಿದೆ.
ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ , ಚಿಕ್ಕಮಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರ ನಿರ್ಮಾಣ ಪ್ರಗತಿಯಲ್ಲಿದೆ. ಆ ಕಾಮಗಾರಿ ಮುಗಿಯುತ್ತಿದ್ದಂತೆ ಹಂತ ಹಂತವಾಗಿ ಇ ಬಸ್ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ನಗರ ಸಾರಿಗೆ: ಈಗಾಗಲೇ ಮೈಸೂರಿನಲ್ಲಿ ಕೆಎಸ್ಆರ್‌ಟಿಸಿ ಇ ಬಸ್ಗಳನ್ನು ನಗರ ಸಂಚಾರಕ್ಕೆ ಬಳಸುತ್ತಿದೆ. ಬೆಂಗಳೂರಿನಲ್ಲಿಯೂ ಬಿಎಂಟಿಸಿ ಇ ಬಸ್ಗಳನ್ನು ರಸ್ತೆಗಿಳಿಸಿದೆ. ಇ ಬಸ್ಗಳ ಉತ್ತೇಜನಕ್ಕೆ ಸಾರಿಗೆ ನಿಗಮಗಳು ಮುಂದಾಗಿದೆ. ಆದರೆ ಇದೀಗ ನಗರ ಸಾರಿಗೆ ಸೇವೆ ನಂತರ ಅಂತರ ನಗರಕ್ಕೂ ಇ ಬಸ್ ಸೇವೆಯನ್ನು ಒದಗಿಸಲು ಕೆಎಸ್ಆರ್‌ಟಿಸಿ ಮುಂದಾಗಿದ್ದು, ಪರಿಸರ ಸ್ನೇಹಿ ಸಮೂಹ ಸಾರ್ವಜನಿಕ ಸಾರಿಗೆ ಸೇವೆ ನೀಡಲು ಮುಂದಾಗಿದೆ.
ರಾಜ್ಯ ರಾಜಧಾನಿಯಲ್ಲಿ ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರಕ್ಕೆ ಲಕ್ಷಾಂತರ ಪ್ರಯಾಣಿಕರ ಆಗಮನದಿಂದ ಸಂಚರಿಸಲು ವಾಹನಗಳು ಹೆಚ್ಚಾಗುತ್ತಲೇ ಇರುತ್ತದೆ. ಪರಿಣಾಮ ಅತಿಯಾದ ವಾಹನಗಳಿಂದ ಮಾಲಿನ್ಯವೂ ಹೆಚ್ಚಾಗುತ್ತಲೇ ಇದೆ. ವರದಿ ಪ್ರಕಾರ ಶೇಕಡಾ 6 ರಷ್ಟು ಮಾಲಿನ್ಯ ಕೇವಲ ಬಸ್ಗಳಿಂದ ಉಂಟಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ ಇ-ಬಸ್ಗಳು ರಸ್ತೆಗೆ ಇಳಿದಿವೆ. ಈ ಪರಿಸರ ಸ್ನೇಹಿ ಇ ಬಸ್ನ ನಗರ ಸಂಚಾರಕ್ಕೆ ಸಚಿವ ಶ್ರೀರಾಮುಲು ಇತ್ತೀಚೆಗೆ ಚಾಲನೆ ನೀಡಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಇ ಕ್ರಾಂತಿಗೆ ಮುನ್ನುಡಿ ಬರೆದ ಕೆಎಸ್ಆರ್‌ಟಿಸಿ.. ಶೂನ್ಯ ಮಾಲಿನ್ಯದತ್ತ ಸಾರಿಗೆ ಸಂಸ್ಥೆ ಚಿತ್ತ