ಬೆಂಗಳೂರು: 10ನೇ ಆವೃತ್ತಿಯ ಬೆಂಗಳೂರು ಮ್ಯಾರಥಾನ್ ಇದೇ ವರ್ಷ ಅಕ್ಟೋಬರ್ 8ರ ಭಾನುವಾರ ನಡೆಯಲಿದೆ. ಈ ಮ್ಯಾರಥಾನ್‌ನ ಲೋಗೋವನ್ನ ಗುರುವಾರ ಬಿಡುಗಡೆ ಮಾಡಲಾಯಿತು. ಮುಂದಿನ 3 ವರ್ಷಗಳಿಗೆ ಬೆಂಗಳೂರು ಮ್ಯಾರಥಾನ್ ಓಟದ ಶೀರ್ಷಿಕೆ ಪ್ರಾಯೋಜಕರಾಗಲು ಪ್ರತಿಷ್ಠಿತ ವಿಪ್ರೋ ಲಿಮಿಟೆಡ್ ಸಂಸ್ಥೆಯು ಎನ್‌ಇಬಿ ಸ್ಪೋರ್ಟ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಈ ಮ್ಯಾರಥಾನ್ ಆರಂಭವಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತ್ತೆ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಅತ್ಯಂತ ಜನಪ್ರಿಯತೆ ಪಡೆದಿರುವ ‘ಸಿಟಿ ರನ್’ನಲ್ಲಿ ವಿವಿಧ ವಯೋಮಾನದ 20 ಸಾವಿರಕ್ಕೂ ಹೆಚು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಲಿದೆ. 42 ಕಿ.ಮೀ. ಪೂರ್ಣ ಮ್ಯಾರಥಾನ್, 21 ಕಿ.ಮೀ. ಹಾಫ್ ಮ್ಯಾರಥಾನ್ ಹಾಗೂ 5 ಕಿ.ಮೀ. ಹೋಪ್ ರನ್ ಓಟಗಳು ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳ ಸಂಸ್ಥೆ (ಎಐಎಂಎಸ್)ಯಿಂದ ಮಾನ್ಯತೆ ಪಡೆದಿದೆ.
ಮ್ಯಾರಥಾನ್ ಸಾಗುವ ದಾರಿಯಲ್ಲಿ ಸಹಾಯ ಕೇಂದ್ರಗಳು, ನೀರು, ವೈದ್ಯಕೀಯ ವ್ಯವಸ್ಥೆ, ಆ್ಯಂಬುಲೆನ್ಸ್ ಇತ್ಯಾದಿ ಇರಲಿವೆ. ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ನಿಯಮಿತ ಪ್ಲಾಸ್ಟಿಕ್ ಹಾಗೂ ಪೇಪರ್ ಬಳಕೆಯಾಗಲಿದೆ. ಉಪಹಾರಗಳಿಗೆ ಪರಿಸರ ಸ್ನೇಹಿ ಕಪ್ ಹಾಗೂ ತಟ್ಟೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಪ್ರಧಾನ ಸ್ಪರ್ಧೆಗೆ ಓಟಗಾರರನ್ನು ತಯಾರಿಸಲು ಎನ್‌ಇಬಿ ಸ್ಪೋರ್ಟ್ಸ್ ನಗರದಾದ್ಯಂತ ಹಲವು ಚಟುವಟಿಕೆಗಳನ್ನು ಆಯೋಜಿಸಲಿದೆ. ಸ್ಪರ್ಧಿಗಳಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ರಧಾನ ಸ್ಪರ್ಧೆಯ ಸಿದ್ಧತೆಗಾಗಿ 3 ಅಭ್ಯಾಸ ಓಟಗಳನ್ನು ಆಯೋಜಿಸಲಾಗುತ್ತದೆ. ಇವುಗಳಲ್ಲಿ ವಿಕಲ ಚೇತನರು, ಅಂಧರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಮ್ಯಾರಥಾನ್‌ನ ಎನ್‌ಜಿಒ ಪಾರ್ಟ್ನರ್ ಆದ ಸ್ನೇಹಾ ಕೇರ್ ಹೋಮ್‌ನಲ್ಲಿ ಮಕ್ಕಳಿಗಾಗಿ ಓಟವೊಂದನ್ನು ನಡೆಸಲಾಗುತ್ತದೆ. ಈ ಪ್ರತಿಷ್ಠಿತ ಕಾರ್ಯಕ್ರಮದೊಂದಿಗೆ ಕೈಜೋಡಿಸಿರುವುದಕ್ಕೆ ಬಹಳ ಹೆಮ್ಮೆ ಇದೆ ಹಾಗೂ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಒಬ್ಬ ಅಥ್ಲೀಟ್ ಆಗಿ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಉಳಿಯಬೇಕಿದ್ದರೆ ಫಿಟ್ ಆಗಿರುವುದು ಹಾಗೂ ಆರೋಗ್ಯವಾಗಿರುವುದು ಎಷ್ಟು ಮುಖ್ಯ ಎನ್ನುವುದು ನನಗೆ ತಿಳಿದಿದೆ ಎಂದು ವಿಪ್ರೋ ಬೆಂಗಳೂರು ಮ್ಯಾರಥಾನ್‌ನ ಪ್ರಚಾರ ರಾಯಭಾರಿ, ಅರ್ಜುನ ಪ್ರಶಸ್ತಿ ವಿಜೇತೆ ರೀತ್ ಅಬ್ರಾಹಾಂ ಹೇಳಿದ್ದಾರೆ.
ಬೆಂಗಳೂರು ಮ್ಯಾರಥಾನ್‌ನ ಶೀರ್ಷಿಕೆ ಪ್ರಾಯೋಜಕರಾಗಿರುವುದು ಬಹಳ ಖುಷಿ ನೀಡಿದೆ. ಕಳೆದ 17 ವರ್ಷಗಳಿಂದ ‘ಸ್ಪಿರಿಟ್ ಆಫ್ ವಿಪ್ರೋ’ ಹೆಸರಿನಲ್ಲಿ ನಮ್ಮ ಉದ್ಯೋಗಿಗಳಿಗೆ ಓಟವನ್ನು ಆಯೋಜಿಸುತ್ತಿದ್ದೇವೆ. ಸಮುದಾಯದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಇದು ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲಿಸಲು ಇದು ಅತ್ಯುತ್ತಮ ಅವಕಾಶ ಎಂದು ವಿಪ್ರೋ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಳ್ ತಿಳಿಸಿದ್ದಾರೆ.
10ನೇ ಆವೃತ್ತಿಯ ಈ ವಿಶೇಷ ಸಂದರ್ಭದಲ್ಲಿ ವಿಪ್ರೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದು ಬಹಳ ಸಂತಸವಾಗಿದೆ. ಓಟಗಾರರ ಆರೋಗ್ಯ ಹಾಗೂ ಯೋಗಕ್ಷೇಮ ನಮ್ಮ ಮೊದಲ ಆದ್ಯತೆಯಾಗಿದೆ. ಮುಂದೆಯೂ ಅದಕ್ಕೇ ನಾನು ಹೆಚ್ಚು ಗಮನ ನೀಡಲಿದ್ದೇವೆ. ಇದು ಪ್ರತಿಯೊಬ್ಬ ಓಟಗಾರನ ವಾರ್ಷಿಕ ಕ್ಯಾಲೆಂಡರ್‌ನ ಅತ್ಯಂತ ನಿರೀಕ್ಷಿತ ಸ್ಪರ್ಧೆಯಾಗಿದೆ. ‘ಸಿಟಿ ರನ್’ ಎಲ್ಲರಲ್ಲೂ ಹೆಮ್ಮೆ ಹಾಗೂ ಸೇರುವಿಕೆ ಮೂಡಿಸುತ್ತದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಹುರಿದುಂಬಿಸಲಿದೆ ಎಂದು ರೇಸ್ ನಿರ್ದೇಶಕ ನಾಗರಾಜ್ ಅಡಿಗ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳಿಗೆ ಮರುಜೀವ ನೀಡಲು ಬಿಬಿಎಂಪಿ ಸರ್ವ ಸಿದ್ಧತೆ: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ..