ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಗುಣಮಟ್ಟ ಮಿತಿ ಮೀರಿದ್ದರೆ ರಾಜ್ಯ ರಾಜಧಾನಿ ಬೆಂಗಳೂರು ವಾಯು ಮಾಲಿನ್ಯ ವಿಚಾರದಲ್ಲಿ ಸೇಫ್ ಸಿಟಿಯಾಗಿದೆ. ಮೆಜೆಸ್ಟಿಕ್, ಸಿಲ್ಕ್ ಬೋರ್ಡ್ ಹೊರತುಪಡಿಸಿದಲ್ಲಿ ಇತರ ಬಹುತೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮವಾಗಿದ್ದು, ಉಸಿರಾಡಲು ಯೋಗ್ಯವಾದ ಗುಣಮಟ್ಟ ಕಾಯ್ದುಕೊಂಡಿದೆ. 50 ರಿಂದ 78 ರವರೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಎಕ್ಯೂಐ ದಾಖಲಾಗಿದೆ.
ನೆರೆಹೊರೆ ರಾಜ್ಯಗಳ ರಾಜಧಾನಿಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಪ್ರಮಾಣ ಈ ಬಾರಿ ಕಡಿಮೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಿನ ಆರಂಭಕ್ಕೆ ಅನ್ವಯವಾಗುವಂತೆ ತೆಗೆದುಕೊಂಡಲ್ಲಿ ಶೇ.50 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯದಲ್ಲಿ ಕಡಿಮೆ ಅಂಕಿ ಸಂಖ್ಯೆಗಳು ದಾಖಲಾಗಿವೆ. ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕೃತ ವೆಬ್ ಸೈಟ್ನಲ್ಲಿ ಸೂಚ್ಯಂಕದ ವಿವರಗಳನ್ನು ನಮೂದಿಸಿದ್ದು, ಇದರಲ್ಲಿ ಈ ಬಾರಿಯ ನವೆಂಬರ್ನಲ್ಲಿ ಕಡಿಮೆ ಮಾಲಿನ್ಯ ದಾಖಲಾಗಿರುವುದು ದೃಢವಾಗಿದೆ. ವಾಯು ಗುಣಮಟ್ಟ ಸೂಚ್ಯಂಕ ಯೋಗ್ಯ ಪ್ರಮಾಣದ ಗೆರೆಯನ್ನು ಕಾಯ್ದುಕೊಂಡಿದೆ.
ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಬಾಪೂಜಿನಗರ, ಜಿಗಣಿ, ಬಿಟಿಎಂ ಲೇಔಟ್ ಮಾತ್ರ ಮಧ್ಯಮ ಪ್ರಮಾಣದ ವಾಯು ಗುಣಮಟ್ಟ ಸೂಚ್ಯಂಕ ದಾಖಲಿಸಿವೆ. ಆದರೂ ಉಸಿರಾಡಲು ಯೋಗ್ಯವಾದ ಗುಣಮಟ್ಟವನ್ನು ಹೊಂದಿವೆ ಎಂದು ಪರಿಗಣಿಸಬಹುದಾಗಿದೆ. ಆದರೆ ಇದನ್ನು ಹೊರತುಪಡಿಸಿ ಹೆಬ್ಬಾಳ, ವಿಲ್ಸನ್ ಗಾರ್ಡನ್, ಜಯನಗರ, ಪೀಣ್ಯ ಸೇರಿ ಇತರ ಕಡೆ ಇರುವ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹಸಿರು ಬಣ್ಣದ ವ್ಯಾಪ್ತಿಯನ್ನು ಕಾಯ್ದುಕೊಂಡಿದೆ.
2023ರ ನವೆಂಬರ್ 7ರಂದು ಮಾಲಿನ್ಯ ನಿಯಂತ್ರಣ ನಿರ್ವಹಣಾ ಘಟಕಗಳಲ್ಲಿ ದಾಖಲಾಗಿರುವ ವಿವರಗಳು:
- ಬಿಟಿಎಂ ಲೇಔಟ್ನಲ್ಲಿ 50 (ಎಕ್ಯೂಐ)
- ಬಾಪೂಜಿನಗರ 67 (ಎಕ್ಯೂಐ)
- ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮಜೆಸ್ಟಿಕ್) 78 (ಎಕ್ಯೂಐ)
- ಹೆಬ್ಬಾಳ 28 (ಎಕ್ಯೂಐ)
- ಹೊಂಬೆಗೌಡ ನಗರ(ವಿಲ್ಸನ್ ಗಾರ್ಡನ್) 31 (ಎಕ್ಯೂಐ)
- ಜಯನಗರ 5ನೇ ಹಂತ 44 (ಎಕ್ಯೂಐ)
- ಜಿಗಣಿ 53 (ಎಕ್ಯೂಐ)
- ಕಸ್ತೂರಿ ನಗರ 32 (ಎಕ್ಯೂಐ)
- ಪೀಣ್ಯ 39 (ಎಕ್ಯೂಐ)
- ಮೈಲಸಂದ್ರ 46 (ಎಕ್ಯೂಐ)
- ಸಾಣೆಗುರವಹಳ್ಳಿ 42 (ಎಕ್ಯೂಐ)
- ಶಿವಪುರ-ಪೀಣ್ಯ 32 (ಎಕ್ಯೂಐ)
- ಸಿಲ್ಕ್ ಬೋರ್ಡ್ 67 (ಎಕ್ಯೂಐ)
2022 ರ ನವೆಂಬರ್ 7 ರಂದು ದಾಖಲಾದ ವಿವರ:
- ಬಿಟಿಎಂ ಲೇಔಟ್ನಲ್ಲಿ 137 (ಎಕ್ಯೂಐ)
- ಬಾಪೂಜಿನಗರ 200 (ಎಕ್ಯೂಐ)
- ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮಜೆಸ್ಟಿಕ್) 120
- ಹೆಬ್ಬಾಳ 107 (ಎಕ್ಯೂಐ)
- ಹೊಂಬೆಗೌಡ ನಗರ(ವಿಲ್ಸನ್ ಗಾರ್ಡನ್) 85 (ಎಕ್ಯೂಐ)
- ಜಯನಗರ 5ನೇ ಹಂತ 104 (ಎಕ್ಯೂಐ)
- ಪೀಣ್ಯ 65 (ಎಕ್ಯೂಐ)
- ಸಿಲ್ಕ್ ಬೋರ್ಡ್ 116 (ಎಕ್ಯೂಐ)
ಕಳೆದ ಬಾರಿ ಅಕ್ಟೋಬರ್ ತಿಂಗಳಿನಲ್ಲಿ ಹಾಗೂ ನವೆಂಬರ್ ಆರಂಭದವರೆಗೂ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿತ್ತು. ಪ್ರಸ್ತುತ ಹಸಿರು ಬಣ್ಣದ ಸೂಚ್ಯಂಕ ಹೊಂದಿರುವ ಕಾರಣಕ್ಕೆ ಉತ್ತಮ ವಾಯು ಗುಣಮಟ್ಟ ಹೊಂದಿದ್ದು, ಮುಂದಿನ ಒಂದೆರಡು ವಾರ ವಾಯು ಗುಣಮಟ್ಟದ ಸೂಚ್ಯಂಕದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ. ಹಸಿರು ಬಣ್ಣದ ಸೂಚ್ಯಂಕದ ಬದಲು ಮಧ್ಯಮ ಪ್ರಮಾಣದ ಸೂಚ್ಯಂಕ ದಾಖಲಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆ ಕಾರಣದಿಂದಲೂ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದ್ದು, ವಾಯು ಗುಣಮಟ್ಟ ಸೂಚ್ಯಂಕ ಉತ್ತಮಗೊಳ್ಳಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಮಳೆ ಕೊರತೆ ಕಂಡು ಬಂದರೂ ಬೆಂಗಳೂರಿನಲ್ಲಿ ಮಾತ್ರ ಮಳೆ ಕೊರತೆ ಅಷ್ಟಾಗಿ ಕಾಣಿಸಿಲ್ಲ, ಉತ್ತಮವಾಗಿಯೇ ಮಳೆ ಬಂದಿದೆ. ಕಳೆದೆರಡು ಮೂರು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಹಾಗಾಗಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.
ಇದನ್ನೂ ಓದಿ: ಕೃಷಿ ತ್ಯಾಜ್ಯ ಸುಡುವಿಕೆ ತಕ್ಷಣ ನಿಲ್ಲಿಸಿ: ಸುಪ್ರೀಂ ಕೋರ್ಟ್ ಆದೇಶ