ಬೆಂಗಳೂರು: ಕೇರಳದಲ್ಲಿ ಕೋವಿಡ್ ಹರಡುವಿಕೆ ಚಿಂತೆಗೀಡು ಮಾಡಿದೆ. ನಿನ್ನೆಯೂ ಕೇರಳದಲ್ಲಿ 31 ಸಾವಿರ ಕೋವಿಡ್ ಪ್ರಕರಣ ದೃಢಪಟ್ಟಿದೆ. ಪಕ್ಕದ ರಾಜ್ಯವೇ ಆಗಿರುವುದರಿಂದ ನಮ್ಮಲ್ಲಿಯೂ ವೈರಸ್ ಹರಡುವ ಭಯ ಖಂಡಿತ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಕೇರಳದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಸರ್ಕಾರ ಗಡಿಪ್ರದೇಶದ ಜಿಲ್ಲೆಗಳಿಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಾಕ್ಸಿನ್ ಪಡೆಯಲೇಬೇಕಿದೆ ಎಂದರು. ಸಿಎಂ ಈಗಾಗಲೇ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕೇರಳ ಪ್ರಯಾಣಿಕರ ಟೆಸ್ಟಿಂಗ್ ಮಾಡಬಹುದು. ಆದರೆ, ಎಲ್ಲರನ್ನೂ ಒಟ್ಟುಗೂಡಿಸುವುದು ಕಷ್ಟ ಆಗುತ್ತಿದೆ ಎಂದರು. ಗಣಪತಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕವಾಗಿ ಹಬ್ಬದ ಆಚರಣೆಗೆ ನಿರ್ಬಂಧವಿದೆ ಎಂದರು.
ಪಾಲಿಕೆಯಿಂದ ಮತ್ತೊಂದು ಡೆತ್ ಆಡಿಟ್ ರಿಪೋರ್ಟ್
ಪಾಲಿಕೆಯು ಕೋವಿಡ್ನಿಂದ ಮೃತಪಟ್ಟ 500 ಜನರ ಡೆತ್ ಆಡಿಟ್ ರಿಪೋರ್ಟ್ ಮಾಡಿದೆ. ಕೊರೋನಾ ಸೋಂಕು ನಿರ್ಲಕ್ಷ್ಯ ಮಾಡಿದ್ದರಿಂದ ಎರಡನೇ ಅಲೆಯಲ್ಲಿ ಶೇ. 20ರಷ್ಟು ಜನರ ಸಾವಾಗಿದೆ ಎಂದು ವಿಶ್ಲೇಷಿಸಿದೆ. ಕೊರೋನಾ ಬಂದ್ರೂ ನಿರ್ಲಕ್ಷ್ಯ ಮಾಡಿ ತಡವಾಗಿ ಆಸ್ಪತ್ರೆಗೆ ಸೇರಿದ ಪರಿಣಾಮ ಈ 500 ಮಂದಿ ಪೈಕಿ ಶೇ. 20 ರಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿದೆ ಉಲ್ಲೇಖಿಸಲಾಗಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಡೆತ್ ಆಡಿಟ್ ರಿಪೋರ್ಟ್ ಬಂದಿದ್ದು, ಸಾವು ಸಂಭವಿಸಿರುವ ಕಾರಣಗಳ ಬಗ್ಗೆ ತಜ್ಞರ ಜೊತೆ ಚರ್ಚಿಸಲಾಗುವುದು. ಸದ್ಯ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.
ಬಿಬಿಎಂಪಿ ಶಾಲಾ ಮಕ್ಕಳಿಗೆ ಲಸಿಕೆ ಪ್ರಸ್ತಾಪ ಇಲ್ಲ:
ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಹೀಗಾಗಿ, ಬಿಬಿಎಂಪಿ ಶಾಲೆಗಳನ್ನು ಆರಂಭಿಸಿದರೂ, 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಮನೆಯಲ್ಲಿ ಪೋಷಕರು ಮಾಸ್ಕ್ ಧರಿಸಿರಬೇಕು. 9 ನೇ ತರಗತಿ ಮೇಲ್ಪಟ್ಟ ಶಾಲೆಗಳು ಆರಂಭವಾಗಿರುವುದರಿಂದ ಅಲ್ಲಿನ ಟೀಚರ್ಸ್, ಸಿಬ್ಬಂದಿ ಲಸಿಕೆ ಪಡೆದಿರಬೇಕಾಗುತ್ತದೆ.
ಮಕ್ಕಳ ತಜ್ಞರ ಸಮಿತಿಯಲ್ಲೂ ಈ ಬಗ್ಗೆ ಚರ್ಚಿಸಲಾಗಿದ್ದು, ಅನ್ಯ ಖಾಯಿಲೆ ಇರುವ (ಕೋಮಾರ್ಬಿಟಿ ಇರುವ) ಮಕ್ಕಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಪೋಷಕರು ವ್ಯಾಕ್ಸಿನ್ ಪಡೆದಿರಲೇಬೇಕಾಗುತ್ತದೆ. ಹನ್ನೆರಡು ವರ್ಷದವರೆಗಿನ ಮಕ್ಕಳ ಗುಂಪಿಗೆ ಲಸಿಕೆ ಬಗ್ಗೆ ಯಾವುದೇ ಅಧ್ಯಯನ ಆಗಿಲ್ಲ. ಆದರೆ 12-18 ವರ್ಷದವರಿಗೆ ವ್ಯಾಕ್ಸಿನ್ ನೀಡುವ ಬಗ್ಗೆ ಅಧ್ಯಯನ ಆಗಿದೆ. ಈ ಬಗ್ಗೆ ನೀತಿ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ನಡೆದಿದ್ದರೆ ಕ್ರಮ
ಸ್ವೆಟರ್ ಖರೀದಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯ ಆಯುಕ್ತ, ಕಳೆದ ವರ್ಷ ಸ್ವೆಟರ್ ಖರೀದಿಯ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸ್ವೆಟರ್ ಸರಬರಾಜು ಆದ ಮೇಲೆಯೇ ಬಿಲ್ ಪಾವತಿ ಮಾಡಲಾಗಿದೆ. ಇದೀಗ ಶಿಕ್ಷಣ ಇಲಾಖೆಯಿಂದ ವರದಿ ಕೇಳಲಾಗಿದ್ದು, ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.