ಬೆಂಗಳೂರು: ಕೊವಿಡ್-19 ಹಿನ್ನೆಲೆ ಲಾಕ್ಡೌನ್ ವೇಳೆ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ರಾಜ್ಯ ಸರ್ಕಾರ ಘೋಷಿಸಿದ್ದ 5 ಸಾವಿರ ಪರಿಹಾರ ಧನ ಇನ್ನೂ ಎಲ್ಲರಿಗೂ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದ ಮೌರ್ಯ ವೃತ್ತದ ಮುಂದೆ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ಪರಿಹಾರಕ್ಕಾಗಿ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಆಟೋ ಚಾಲಕರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದವು. 5 ಸಾವಿರ ಎಲ್ಲಿ ಎಂದು ಭಿತ್ತಿಪತ್ರ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆಮ್ ಆದ್ಮಿ ಪಕ್ಷದ ಆಟೋ ಘಟಕದ ವೆಂಕಟೇಶ್ ಗೌಡ ಮಾತನಾಡಿ, ಲಾಕ್ಡೌನ್ ವೇಳೆ ಸರ್ಕಾರ ರಾಜ್ಯದ ಎಲ್ಲಾ ಆಟೋ ಚಾಲಕರಿಗೆ ಐದು ಸಾವಿರ ರೂ. ನೀಡುವುದಾಗಿ ಘೋಷಿಸಿತ್ತು. ಇದರಂತೆ ಅರ್ಹ ಆಟೋ ಚಾಲಕರು ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರವೇ ಹೇಳಿದಂತೆ ಎಲ್ಲರಿಗೂ ಪರಿಹಾರ ಕೊಟ್ಟಿಲ್ಲ. ಶೇ. 40ರಷ್ಟು ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮಾತ್ರ ಪರಿಹಾರ ನೀಡಿದ್ದಾರೆ. ಇನ್ನೊಂದು ವಾರದೊಳಗೆ ಅನುದಾನ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.