ಬೆಂಗಳೂರು: ಅನರ್ಹ ಶಾಸಕ ಶ್ರೀಮಂತ ಪಾಟೀಲ್ಗೆ ಬಿಜೆಪಿ ಟಿಕೆಟ್ ನೀಡುವ ನಿರ್ಧಾರ ಕೈಗೊಂಡರೆ ಪಕ್ಷ ತೊರೆಯುವ ಕುರಿತು ಚಿಂತನೆ ನಡೆಸಬೇಕಾಗಲಿದೆ ಎಂದು ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಕಮಲ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.
ಅನರ್ಹ ಶಾಸಕರಿಗೆ ಮಣೆ ಹಾಕುವುದಾದರೆ ನಾವ್ಯಾಕೆ ಇರಬೇಕು? ಯಡಿಯೂರಪ್ಪ ಮಾತ್ರ ಏನು ಬೇಕಾದ್ರೂ ಮಾಡಿ ಅಧಿಕಾರಕ್ಕೆ ಬರಬಹುದು. ನಾವು ಮಾತ್ರ ಎಲ್ಲವನ್ನು ನೋಡುತ್ತ ಸುಮ್ಮನೆ ಕೂರಬೇಕಾ? ಇಂತವರ ಜೊತೆಗೆ ಇರುವುದಕ್ಕಿಂತ ಪಕ್ಷದಿಂದ ಹೊರ ಹೋಗುವುದೇ ಲೇಸು ಎಂದು ಕಾಗೆ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜು ಕಾಗೆ 30 ಸಾವಿರ ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ವಿರುದ್ಧ ಪರಾಭವಗೊಂಡಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಆಗಿರುವ ಇವರಿಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್ಗೆ ಟಿಕೆಟ್ ನೀಡಿದ್ರೆ ಪಕ್ಷ ತೊರೆಯುವ ಕುರಿತು ಆಪ್ತರ ಮೂಲಕ ರಾಜ್ಯ ನಾಯಕರಿಗ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಸುಪ್ರೀಂಕೋರ್ಟ್ ತೀರ್ಪು ಕಾದು ನೋಡುತ್ತಿರುವ ರಾಜು ಕಾಗೆ ತೀರ್ಪಿನ ನಂತರ ಅನರ್ಹರ ಸ್ಪರ್ಧೆಗೆ ಅವಕಾಶ ಸಿಕ್ಕಲ್ಲಿ ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ರಾಜು ಕಾಗೆ ಬೇಸರಗೊಂಡಿದ್ದು, ಶೀಘ್ರದಲ್ಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.