ಬೆಂಗಳೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಾಕಿ ಇರುವ ರೈತ ಫಲಾನುಭವಿಗಳು ಇ ಕೆವೈಸಿ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ. ದಯಾನಂದ್ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000 ರೂ. ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಈ ಅನುದಾನವನ್ನು 2,000 ರೂ. ಗಳಂತೆ ವಾರ್ಷಿಕ 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯೋಜನೆಯ ರೈತ ಕುಟುಂಬಗಳಿಗೆ ಹೆಚ್ಚುವರಿಯಾಗಿ 2 ಕಂತುಗಳಲ್ಲಿ ವರ್ಷಕ್ಕೆ 4,000 ರೂ. ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಯೋಜನೆಯ ಆರ್ಥಿಕ ನೆರವು ಪಡೆಯಲು ರೈತ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ ಈವರೆಗೆ 21,448 ರೈತರು, ಶೇ.67 ರಷ್ಟು (ಆನೇಕಲ್ ಶೇ.71, ಬೆಂ.ದಕ್ಷಿಣ ಶೇ.74, ಬೆಂ.ಉತ್ತರ ಶೇ.63, ಬೆಂ.ಪೂರ್ವ ಶೇ.53 ಮತ್ತು ಯಲಹಂಕ ಶೇ.54) ರೈತರು ಇ-ಕೆವೈಸಿ ಮಾಡಿಸಿದ್ದು, ಇನ್ನೂ 10,415 ಫಲಾನುಭವಿ ರೈತರು ಶೇ.33 ರಷ್ಟು (ಆನೇಕಲ್ ಶೇ.29, ಬೆಂ.ದಕ್ಷಿಣ ಶೇ.26, ಬೆಂ.ಉತ್ತರ ಶೇ.37, ಬೆಂ.ಪೂರ್ವ ಶೇ.47 ಮತ್ತು ಯಲಹಂಕ ಶೇ.46) ಬಾಕಿ ಇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಓಟಿಪಿ ಆಧಾರಿತ ಇ ಕೆವೈಸಿಗೆ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರುವ ಫಲಾನುಭವಿಗಳು ಸ್ವತಃ ತಾವೇ ಅಥವಾ ಇತರರ ಸಹಾಯ ಪಡೆದು http://exlink/pmkisan.gov.in/aadharekyc.aspx ಲಿಂಕ್ ನಲ್ಲಿ ಆಧಾರ್ ಸಂಖ್ಯೆ ಮತ್ತು ಓಟಿಪಿ ಯನ್ನು ನಮೂದಿಸಿ ಇ ಕೆವೈಸಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 91 ಕೋಟಿ ಬಾಕಿ : ಸಿಎಜಿ ವರದಿಯಲ್ಲಿ ಬಹಿರಂಗ
ಬಯೋಮೆಟ್ರಿಕ್ ಆಧಾರಿತ ಇ ಕೆವೈಸಿ ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗದಿರುವ ಫಲಾನುಭವಿಗಳು ಗ್ರಾಮ ಒನ್ ಕೇಂದ್ರ, ಸಿಎಸ್ಸಿ ಕೇಂದ್ರದ ಮೂಲಕ ತಮ್ಮ ಹೆಬ್ಬೆಟ್ಟಿನ ಗುರುತಿನ ಆಧಾರದ ಮೇಲೆ ಇ ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಪಿಎಂ ಕಿಸನ್ ಫೇಸ್ ರೆಕಗ್ನಿಷನ್ ಆ್ಯಪ್ ಮೂಲಕ ತಮ್ಮ ಇ ಕೆವೈಸಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
14ನೇ ಕಂತಿನ ಆರ್ಥಿಕ ನೆರವು ವರ್ಗಾವಣೆಗಾಗಿ ಎಲ್ಲಾ ಫಲಾನುಭವಿಗಳು ಜೂನ್ 30 ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿ ಸಿಬ್ಬಂದಿಯನ್ನು ಹಾಗೂ ನಾಗರಿಕ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ, ಕಡ್ಡಾಯವಾಗಿ ಇ ಕೆವೈಸಿ ಮಾಡಿಸಿಕೊಳ್ಳಬೇಕು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : 50.36 ಲಕ್ಷ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ