ಬೆಂಗಳೂರು : ಚಿನ್ನ ಇಡಲಾಗಿದ್ದ ಬ್ಯಾಗ್ ಅನ್ನು ಅಪರಿಚಿತರು ಸುಲಿಗೆ ಮಾಡಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿ ಜ್ಯುವೆಲ್ಲರಿ ಶಾಪ್ ಮಾಲೀಕನ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಸೇಲ್ಸ್‌ಮ್ಯನ್ ಹಲಸೂರು ಗೇಟ್ ಪೊಲೀಸರ ಅತಿಥಿಯಾಗಿದ್ದಾನೆ.
ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿರುವ ಚಿನ್ನದ ಮಳಿಗೆಯ ಮಾಲೀಕ ಅಭಿಷೇಕ್ ಎಂಬವರು ನೀಡಿದ ದೂರಿನ ಮೇರೆಗೆ ಇದೇ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಾಜಸ್ತಾನ ಮೂಲದ ಲಾಲ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1 ಕೆ.ಜಿಗೂ ಹೆಚ್ಚು ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈತನಿಗೆ ಸಹಕರಿಸಿದ ಮತ್ತೋರ್ವ ಆರೋಪಿ ರಾಜ್ ಪಾಲ್ ಎಂಬಾತನನ್ನೂ ಬಂಧಿಸಲಾಗಿದೆ.
ಏಳು ತಿಂಗಳಿಂದ ಅಭಿಷೇಕ್ ಅವರ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಲಾಲ್ ಸಿಂಗ್ ಮಾಲೀಕರ ನಂಬಿಕೆ ಗಳಿಸಿಕೊಂಡಿದ್ದ. ಕಳೆದ ತಿಂಗಳು 28ರಂದು ಆಂಧ್ರದ ನಲ್ಲೂರಿನಲ್ಲಿರುವ ಮುಕೇಶ್ ಹಾಗೂ ಶುಭಂ ಗೋಲ್ಡ್ ಜ್ಯುವೆಲ್ಲರಿ ಶಾಪ್ಗಳ ಮಾಲೀಕರಿಗೆ 1.262 ಕೆ.ಜಿ ಚಿನ್ನಾಭರಣ ಕೊಟ್ಟು ಬರುವಂತೆ ಲಾಲ್ ಸಿಂಗ್ಗೆ ಮಾಲೀಕರು ಸೂಚಿಸಿದ್ದರು. ಚಿನ್ನಾಭರಣ ಬ್ಯಾಗ್ ನೀಡುತ್ತಿದ್ದಂತೆ ಆರೋಪಿ ತನ್ನ ವಕ್ರ ಬುದ್ಧಿ ಪ್ರದರ್ಶಿಸಿದ್ದಾನೆ. ಬೆಂಗಳೂರಿನಲ್ಲಿರುವ ಸಹಚರರಿಗೆ ವಿಷಯ ತಿಳಿಸಿ ದೋಚುವ ಬಗ್ಗೆ ಸಂಚು ನಡೆಸಿದ್ದಾನೆ.
ನೆಲ್ಲೂರಿನ ಕಾಳಹಸ್ತಿ ಬಳಿ ತೆರಳಿ ಮಾಲೀಕರಿಗೆ ಫೋನ್ ಮಾಡಿ ಯಾರೋ ಅಪರಿಚಿತರು ಗನ್ ಇಟ್ಟು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನವಿರುವ ಬ್ಯಾಗ್ ಕಸಿದುಕೊಂಡರು ಎಂದು ಸುಳ್ಳು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ನಿರಂತರವಾಗಿ ಎರಡು ದಿನಗಳ ಕಾಲ ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿರುವುದನ್ನು ಕಂಡು ಅನುಮಾನಗೊಂಡ ಮಾಲೀಕರು ಸ್ವತಃ ತಾನೇ ಕಾಳಹಸ್ತಿಗೆ ತೆರಳಿದ್ದರು. ಅಷ್ಟೊತ್ತಿಗಾಗಲೇ ಲಾಲ್‌ಸಿಂಗ್ ಚಿನ್ನಾಭರಣವನ್ನು ಸಹಚರರ ಮೂಲಕ ರಾಜಸ್ತಾನಕ್ಕೆ ಕಳುಹಿಸಿದ್ದನು.
ಆ ನಂತರ ನಿರಂತರ ಶೋಧ ನಡೆಸಿದ ಬಳಿಕ ಲಾಲ್ ಸಿಂಗ್‌ನನ್ನು ಪತ್ತೆ ಹಚ್ಚಿ ಮಾಲೀಕರು ಬೆಂಗಳೂರಿಗೆ ಕರೆತಂದಿದ್ದರು. ಬ್ಲೇಡ್‌ನಿಂದ ಕೈಗಳನ್ನು ಕೊಯ್ದುಕೊಂಡಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್ಸ್‌ಸ್ಪೆಕ್ಟರ್ ಹನುಮಂತ್ರ ಭಜಂತ್ರಿ, ಚಾಕುವಿನಿಂದ ಕೈಗಳ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ಹೇಳಿಕೆಗೂ ಕೈ ಮೇಲೆ ಆಗಿರುವ ಗಾಯಕ್ಕೂ ಸಾಮ್ಯತೆ ಬರದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅಪರಾಧ ಕೃತ್ಯದ ಬಗ್ಗೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.
10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ಕೂಲಂಕಷ ವಿಚಾರಣೆ ನಡೆಸಿದಾಗ ಕದ್ದ ಮಾಲನ್ನು ರಾಜಸ್ತಾನಕ್ಕೆ ಸಹಚರರ ಮೂಲಕ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸಹಚರ ರಾಜ್ ಆಲಿಯಾಸ್ ರಾಜಪಾಲ್‌ನನ್ನು ವಶಕ್ಕೆ ಪಡೆದು 75 ಲಕ್ಷ ರೂ ಮೌಲ್ಯದ 1.262 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯವೆಸಗಲು ಸಹಕರಿಸಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಟೈಲ್ಸ್ ಕೆಲಸಕ್ಕೆ ಬಂದು ಜೈನ ಮಂದಿರದ ಬೆಳ್ಳಿಯ ಆಭರಣ ಕಳ್ಳತನ; ಮಾಲು ಸಮೇತ ನಾಲ್ವರ ಬಂಧನ