ಬೆಂಗಳೂರು: ಮಹಿಳಾ ಪಿಜಿಗಳಲ್ಲಿ ವಾಸವಿರುವ ಯುವತಿಯರು ಸ್ನಾನಗೃಹದಲ್ಲಿರುವ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಶನಿವಾರ ಮಹಾದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕ.
ಮಹದೇವಪುರ ವ್ಯಾಪ್ತಿಯ ಹೂಡಿಯಲ್ಲಿರುವ ಪಿಜಿಯಲ್ಲಿ ವಾಸವಿದ್ದ ಆರೋಪಿ, ಖಾಸಗಿ ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ತಾನು ವಾಸಿಸುತ್ತಿದ್ದ ಪಿಜಿ ಮುಂಭಾಗದಲ್ಲೇ ಮಹಿಳಾ ಪಿಜಿ ಸಹ ಇದೆ. ಮಹಿಳಾ ಪಿಜಿಯ ಸ್ನಾನಗೃಹಕ್ಕೆ ಯಾರಾದರೂ ಸ್ನಾನ ಮಾಡಲು ಬರ್ತಿದ್ದಂತೆ ಅಲರ್ಟ್ ಆಗುತ್ತಿದ್ದ ಆರೋಪಿ, ಸ್ನಾನಗೃಹದ ವೆಂಟಿಲೇಷನ್ ಸ್ಥಳದಿಂದ ಯುವತಿಯರನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. ಜೂನ್ 21ರಂದು ಇದೇ ರೀತಿ ಸ್ನಾನಗೃಹದ ವಿಡಿಯೋ ಮಾಡುತ್ತಿದ್ದಾಗ ಸ್ಥಳಿಯರೇ ಹಿಡಿದು ಮಹದೇವಪುರ ಠಾಣಾ ಪೊಲೀಸರ ಕೈಗೊಪ್ಪಿಸಿದ್ದಾರೆ.
ಇದನ್ನೂ ಓದಿ: Bengaluru crime: ಬಾಡಿಗೆ ಮನೆ ಹುಡುಕುವ ನೆಪದಲ್ಲಿ ವಿಕೃತಿ.. ಮಹಿಳೆಯರ ಉಡುಪು ತಡಕಾಡುವ ವ್ಯಕ್ತಿಯಿಂದ ಆತಂಕ!
ಮೊಬೈಲ್ ಫೋನ್ ಪರಿಶೀಲಿಸಿದಾಗ ಯುವತಿಯರ ಸ್ನಾನಗೃಹದ ಒಟ್ಟು 7 ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಕಳೆದ ಮೂರು ನಾಲ್ಕು ತಿಂಗಳಿಂದ ಆರೋಪಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ. ವಿಡಿಯೋ ಮಾಡಿ ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಲೇಡಿಸ್ ಪಿಜಿಯಲ್ಲಿರುವವರನ್ನು ವಿಚಾರಿಸುತ್ತೇವೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ದುಷ್ಕೃತ್ಯ: ಕಳೆದ ಮೂರು ನಾಲ್ಕು ತಿಂಗಳಿಂದ ಆರೋಪಿಯು ಈ ಲೇಡಿಸ್ ಪಿಜಿಯ ಸ್ನಾನಗೃಹದ ವಿಡಿಯೋಗಳನ್ನು ಮಾಡಿರುವುದು ಕಂಡುಬರುತ್ತಿದೆ. ಸದ್ಯ ಆರೋಪಿಯ ಮೊಬೈಲ್ನಲ್ಲಿ ಒಟ್ಟು 7 ವಿಡಿಯೋಗಳಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru crime: ಹೈದರಾಬಾದ್ ಮೂಲದ ಯುವತಿಯ ಹತ್ಯೆ ಪ್ರಕರಣ: ಆರೋಪಿ ಪ್ರಿಯಕರನ ಪತ್ತೆಗಾಗಿ ಲುಕ್ ಔಟ್ ನೋಟಿಸ್
ಬೆಂಗಳೂರಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದ ವಿಕೃತ ಕಾಮುಕ: ಇನ್ನು ಮಹಿಳೆಯರ ಸ್ನಾನದ ವಿಡಿಯೋ ಮಾಡುವುದು, ಅವರ ಒಳ ಉಡುಪುಗಳನ್ನು ಕದಿಯುವ ಕೆಲವು ಪ್ರಕರಣಗಳನ್ನು ಕಳೆದ ತಿಂಗಳಲ್ಲಿ ಹೆಚ್ಚಾಗಿ ದಾಖಲಾಗಿವೆ. ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ವಿಧಾನಸೌಧ ಲೇಔಟ್ನಲ್ಲಿ ಇತ್ತೀಚೆಗೆ ಈ ರೀತಿಯ ಪ್ರಕರಣ ದಾಖಲಾಗಿದೆ. ವಿಕೃತ ಕಾಮುಕ ಬಾಡಿಗೆ ನೆಪದಲ್ಲಿ ಮನೆಗಳಿಗೆ ತೆರಳಿ ಅಸಭ್ಯವಾಗಿ ವರ್ತಿಸುವ ಬಗ್ಗೆ ದೂರು ದಾಖಲಾಗಿತ್ತು.
ಸಂಜೆಯ ವೇಳೆ ಒಂಟಿ ಮಹಿಳೆಯರು ಇರುವ ಮನೆಗಳಿಗೆ ತೆರಳಿ ಒಣ ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುವ ಜೊತೆಗೆ ವಿಡಿಯೋ ಮಾಡುತ್ತಿದ್ದ ಎಂದು ಸ್ಥಳೀಯರು ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.