ಬೆಂಗಳೂರು: ಮಾರಕಾಸ್ತ್ರಗಳಿಂದ ಹೊಡೆದು ಕೊಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಗುಂಡಿಯಲ್ಲಿ ಪತ್ತೆಯಾದ ಘಟನೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಕೋಗಿಲು ಲೇಔಟ್ನಲ್ಲಿ ವರದಿಯಾಗಿದೆ. ಬಿಹಾರ ಮೂಲದ ಶಕೀಲ್ ಅಕ್ತರ್ ಸೈಫಿ (28) ಕೊಲೆಯಾದ ವ್ಯಕ್ತಿ.
ಕೋಗಿಲು ಲೇಔಟ್ನ ಮೂರನೇ ಕ್ರಾಸ್ನಲ್ಲಿ ಶಕೀಲ್ ವಾಸವಿದ್ದರು. ಆದರೆ ಹತ್ಯೆಗೈದು ಬೆಡ್ ಶೀಟ್ನಲ್ಲಿ ಮೂಟೆ ಕಟ್ಟಿರುವ ಸ್ಥಿತಿಯಲ್ಲಿ ಶಕೀಲ್ ಶವ ಇಂದು ಪಿಟ್ ಗುಂಡಿಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ ಶವವನ್ನು ಗುರುತಿಸಿದ ಸ್ಥಳೀಯರು ಸಂಪಿಗೆಹಳ್ಳಿ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಶಕೀಲ್ ವಾಸವಿದ್ದ ನಿವೇಶನದ ಮಾಲೀಕ ಮಾರ್ಟಿನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಕೊಲೆಗೈದು, ಮೂಟೆಯಲ್ಲಿ ಶವ ಕಟ್ಟಿ ಬಳಿಕ ಎಸೆದಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಹಾರದಿಂದ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಶಕೀಲ್, ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದರು. ಬಿಹಾರದಲ್ಲಿ ಮೊದಲ ವಿವಾಹವಾಗಿದ್ದರೂ ಸಹ ಬೆಂಗಳೂರಿನಲ್ಲಿ ಮತ್ತೊಂದು ಮದುವೆಯಾಗಿದ್ದರು. ಎರಡನೇ ಪತ್ನಿ ಹಾಗೂ ಮಗು ಜೊತೆ ಕೋಗಿಲು ಲೇಔಟಿನ ಮೂರನೇ ಕ್ರಾಸ್ನಲ್ಲಿ ವಾಸವಾಗಿದ್ದರು.
ಇದನ್ನೂ ಓದಿ: ರಾಯಚೂರು: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ರಾಮನಗರದಲ್ಲಿಂದು ರೌಡಿಶೀಟರ್ ಬರ್ಬರ ಹತ್ಯೆ: ರಾಮನಗರದ ಕೆರೆಮೇಗಳ ದೊಡ್ಡಿ ಗ್ರಾಮದಲ್ಲಿ ರೌಡಿ ಶೀಟರ್ ಲೋಕೇಶ್ (38) ಎಂಬುವವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ತಾಲೂಕಿನ ಕೆರೆಮೇಗಳ ದೊಡ್ಡಿ ಗ್ರಾಮದ ಲೋಕೇಶ್ ಮೇಲೆ ರೌಡಿಶೀಟರ್ ಪ್ರಕರಣವಿತ್ತು. ಕಳೆದ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸ್ನೇಹಿತರ ಜೊತೆ ಮದ್ಯ ಕುಡಿಯಲು ಹೋಗಿದ್ದ ವೇಳೆ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಹತ್ಯೆಯಾದ ಸ್ಥಳಕ್ಕೆ ರಾಮನಗರ ಎಸ್ಪಿ ಭೇಟಿ: ಹತ್ಯೆಯಾದ ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನು, ಹತ್ಯೆಯಾದ ಸ್ಥಳಕ್ಕೆ ಎಎಸ್ಪಿ ಸುರೇಶ್, ಡಿವೈಎಸ್ಪಿ ದಿನಕರ್ ಶೆಟ್ಟಿ ಭೇಟಿ ನೀಡಿದರು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.