ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ಬಂಧನ ವಾರಂಟ್ ರದ್ದು ಪಡಿಸುವಂತೆ ಕೋರಲಾದ ಮನವಿ ಮೇಲಿನ ಆದೇಶವನ್ನು ಜನಪ್ರತಿನಿಧಿಗಳ ಕೋರ್ಟ್ ಕಾಯ್ದಿರಿಸಿದೆ.
ವಿಶ್ವನಾಥ್ ವಿರುದ್ಧ ಆರ್.ಟಿ.ನಗರದ ಎ.ಮೋಹನ್ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್ ಸೋಮವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ವಿಶ್ವನಾಥ್ ಪರ ಹಾಜರಾಗಿದ್ದ ವಕೀಲ ಶತಭಿಷ ಶಿವಣ್ಣ ಮೆಮೊ ಸಲ್ಲಿಸಿ, ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆ ಕಲಂ 70 (2) ಅನುಸಾರ ಆರೋಪಿಯ ಗೈರು ಹಾಜರಿಯಲ್ಲಿ ವಾರಂಟ್ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಮೆಮೊ ಪರಿಶೀಲಿಸಿದ ನ್ಯಾಯಾಧೀಶರು ಈ ಕುರಿತ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆಯಿಂದಾಗಿ ಬಡವರೂ ಸಹ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಂತಾಗಿದೆ: ಹೈಕೋರ್ಟ್ ಬೇಸರ
ಎ.ಮೋಹನ್ ಕುಮಾರ್ ವಿರುದ್ಧ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಈ ಹಿಂದೆ ಖಾಸಗಿ ಮಾಧ್ಯಮವೊಂದರಲ್ಲಿ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಘನತೆಗೆ ಕುಂದು ಉಂಟಾಗಿದೆ ಎಂದು ಎ ಮೋಹನ್ ಕುಮಾರ್ ಅವರು ಶಾಸಕ ವಿಶ್ವನಾಥ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣ ಸಂಬಂಧ ವಿಶ್ವನಾಥ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.
ಅಂತೆಯೇ ಜಾಮೀನು ರಹಿತ ಬಂಧನ ವಾರಂಟ್ ರದ್ದು ಪಡಿಸುವಂತೆ ಕೋರಿ ಎಸ್ ಆರ್ ವಿಶ್ವನಾಥ್ ಅವರು ಅರ್ಜಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ಕೋರ್ಟ್, ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ.
ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ತಂದೆ, ಜರ್ಮನಿಯಲ್ಲಿ ತಾಯಿ; ಅಪ್ರಾಪ್ತ ಮಗನ ಸಂಕಷ್ಟ ನಿವಾರಿಸಿದ ಹೈಕೋರ್ಟ್