ಬೆಂಗಳೂರು : ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಡಿ ಐವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ರೊ ಲೇಔಟ್ ಬಳಿ ಕಾರಿನಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ ಅವರಿಂದ ಚಿನ್ನಾಭರಣ ದೋಚಲು ಸ್ಕೆಚ್ ಹಾಕಿದ್ದ ರೌಡಿ ಡಿಯೊ ರವಿ, ಪ್ರತಾಪ್, ಅಮೃತ್, ಸತೀಶ್ ಹಾಗೂ ನವೀನ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳ ಪೈಕಿ ರವಿ ಎಂಬಾತ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕುಖ್ಯಾತ ರೌಡಿ ಅಭಿ ಯಾನೆ ಅಂದ್ರಹಳ್ಳಿ ಅಭಿ ಸಹಚರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.