ಬೆಂಗಳೂರು: ಸಾರಿಗೆ ನೌಕರರೊಂದಿಗೆ ನಾವು ನಿಲ್ಲುತ್ತೇವೆ. ಮುಷ್ಕರ ನಿರತ ನೌಕರರ ಮೇಲೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು. ತಕ್ಷಣವೇ ರಾಜ್ಯ ಸರ್ಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್ ಶ್ರೀನಿವಾಸ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಸ್ತೆ ಸಾರಿಗೆ ನಿಗಮದಲ್ಲಿರುವ ಸಮಸ್ಯೆಗಳು, ಸಾರಿಗೆ ನಿಗಮಕ್ಕೆ ಸರ್ಕಾರದ ಬೆಂಬಲದ ಕೊರತೆ, ನೌಕರರ ಹಕ್ಕುಗಳನ್ನು ಗೌರವಿಸದಿರುವುದು, ಸಂಘಟನೆಗಳನ್ನು ಮಾನ್ಯ ಮಾಡದಿರುವುದು ಸೇರಿದಂತೆ ಮುಂತಾದವು ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವಾಗಿದೆ. ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗ್ತಿಲ್ಲ. ಮುಷ್ಕರ ಹೀಗೆ ಮುಂದುವರೆದರೆ ಬಸ್ ಪ್ರಯಾಣವನ್ನೇ ನಂಬಿಕೊಂಡಿರುವ ಬಡ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ನೌಕರರು ಕೂಡ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ಪರ್ಯಾಯ ಮಾರ್ಗಗಳನ್ನು ಅನುಸರಿಸಿದರೆ ಬಡ ಪ್ರಯಾಣಿಕರಿಗೆ ಸಹಾಯವಾಗುತ್ತದೆ ಎಂದು ಈ ಮೂಲಕ ಮನವಿ ಮಾಡಿದರು.
ರಾಜ್ಯಾದ್ಯಂತ ನಡೆಯುತ್ತಿರುವ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರಕ್ಕೆ ಇಂದಿಗೆ ಮೂರು ದಿನ ನಡೆಯುತ್ತಿದೆ. ಬಹಳ ವರ್ಷಗಳಾದ ನಂತರ ಈ ರೀತಿ ಸಂಪೂರ್ಣ ಮುಷ್ಕರ ನಡೆಯುತ್ತಿರುವ ಹಿನ್ನೆಲೆ ಸಾರಿಗೆ ಸೇವೆ ಸ್ತಬ್ಧವಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಮುಖ್ಯ ಹೊಣೆ ಸರ್ಕಾರದ ಮೇಲಿದೆ ಎಂದು ವಿನಯ್ ಶ್ರೀನಿವಾಸ್ ಹೇಳಿದರು.