ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಖಾಸಗಿ ಬಸ್ಗಳಿಗೂ ವಿಸ್ತರಣೆ ಮಾಡಬೇಕು ಹಾಗೂ ರಸ್ತೆ ತೆರಿಗೆ ರದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆಗಳ ಒಕ್ಕೂಟ ಸೋಮವಾರ ಬೆಂಗಳೂರು ಬಂದ್ ಕರೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವ ಬಿಎಂಟಿಸಿ ಹೆಚ್ಚುವರಿ ಬಸ್ಗಳ ಜೊತೆಗೆ ಟ್ರಿಪ್ ಸಂಖ್ಯೆಯಲ್ಲೂ ಏರಿಕೆ ಮಾಡಲು ಸಿದ್ಧತೆ ನಡೆಸಿದೆ.
ನಾಳೆ ನಡೆಯುತ್ತಿರುವ ಬೆಂಗಳೂರು ಬಂದ್ಗೆ ಆಟೋ, ಖಾಸಗಿ ಬಸ್, ಕ್ಯಾಬ್ ಸೇರಿದಂತೆ ಪ್ರಯಾಣಿಕ ಆಧಾರಿತ ಸೇವೆಯಲ್ಲಿ ವ್ಯತ್ಯಯ ಆಗಲಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆಯಿದೆ. ಈ ದಿಸೆಯಲ್ಲಿ ಬಿಎಂಟಿಸಿಯು ಇಂದು ಮಧ್ಯರಾತ್ರಿಯಿಂದ ನಾಳೆ ರಾತ್ರಿವರೆಗೂ ಹೆಚ್ಚುವರಿ ಬಸ್ ಓಡಿಸಲು ನಿರ್ಧರಿಸಿದೆ.
ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ 5,601 ಬಸ್ಗಳಿಂದ 57,450 ಟ್ರಿಪ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ, ಇಂದು ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಖಾಸಗಿ ಆಟೋ, ಟ್ಯಾಕ್ಸಿ ಮತ್ತು ವಾಹನಗಳ ಚಾಲಕರ ಒಕ್ಕೂಟವು ತಮ್ಮ ವಿವಿಧ ಬೇಡಿಕಗಳ ಈಡೇರಿಕೆಗಾಗಿ ಬಂದ್ ಕರೆ ನೀಡಿರುವ ಹಿನ್ನೆಲೆ ಹೆಚ್ಚುವರಿ ಬಸ್ ಸೇವೆ ನೀಡಲಾಗುತ್ತಿದೆ.
ವಿವಿಧ ಮಾರ್ಗಗಳಲ್ಲಿ ಬಸ್ ಸಂಚಾರ: ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನಗರದ ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ ಆರ್ ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ, ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ ಹಾಗೂ ಒಳವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಬಸ್ಗಳು ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ 500 ಬಸ್ಗಳಿಂದ ಸುಮಾರು 4 ಸಾವಿರ ಹೆಚ್ಚುವರಿ ಟ್ರಿಪ್ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.
ಅಲ್ಲದೆ ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ ಜಂಕ್ಷನ್ಗಳಲ್ಲಿ ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಸಾರಥಿ ಗಸ್ತು ಪಡೆಗಳನ್ನು ನಿಯೋಜಿಸಿ, ಸಂಸ್ಥೆಯ ಸಾರಿಗೆಗಳ ಮೇಲ್ವಿಚಾರಣೆ ಮಾಡಿಸಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಶಕ್ತಿ ಯೋಜನೆ'ಯಿಂದ ನಷ್ಟ, ಬಂದ್ ಕರೆ: ನಾಳೆ ಆಟೋ, ಕ್ಯಾಬ್, ಖಾಸಗಿ ಬಸ್ ಸೇವೆ ಇರಲ್ಲ