ಬೆಂಗಳೂರು: ರಾಜ್ಯದಲ್ಲಿ ಬರಗಾಲವಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಬಹುತೇಕ ಶಾಂತಿಯುತವಾಗಿತ್ತು. ಮಂಗಳವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‌ನಿಂದ ನಗರದಲ್ಲಿ ಕೆಲ ಅಂಗಡಿಮುಂಗಟ್ಟುಗಳು, ಖಾಸಗಿ ಕಂಪನಿಗಳು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಸಹಕರಿಸಿದ್ದವು. ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ಕಡಿಮೆಯಿತ್ತು. ಆಟೋ, ಕ್ಯಾಬ್‌ಗಳು, ಸಾರಿಗೆ ವಾಹನಗಳು ಹಾಗೂ ನಮ್ಮ ಮೆಟ್ರೋ ಸಂಚಾರವು ಎಂದಿಗಿಂತ ಕಡಿಮೆ ಇತ್ತು.
ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ: ಬಂದ್ ಹಿನ್ನೆಲೆಯಲ್ಲಿ ಟೌನ್‌ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ನ್ಯಾಷನಲ್ ಕಾಲೇಜು, ಮೈಸೂರು ರಸ್ತೆ ಮೈದಾನ ಸೇರಿದಂತೆ ಮುಂತಾದ ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನೊಂದೆಡೆ, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತಪರ ಹೋರಾಟಗಾರರು ಬಾರುಕೋಲು ಚಳವಳಿಯನ್ನು ನಡೆಸಿದರು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ಹರಿಸುವುದನ್ನು ನಿಲ್ಲಿಸುವುದಾಗಿ ಘೋಷಣೆ ಕೂಗಿದರು. ಇದೇ ವೇಳೆ ರೈತಪರ ಹೋರಾಟಗಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿದರು. ಇದನ್ನು ಪೊಲೀಸರು ತಡೆದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಗಾಂಧಿನಗರದಲ್ಲಿರುವ ರಕ್ಷಣಾ ವೇದಿಕೆಯ ಕಚೇರಿಯಿಂದ ಮುಖ್ಯಮಂತ್ರಿ ನಿವಾಸಕ್ಕೆ ಪ್ರತಿಭಟನೆ ನಡೆಸಲು ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ: ಮೈಸೂರು ಬ್ಯಾಂಕ್ ವೃತ್ತದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ನೀಡಿರುವ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಜೆಡಿಎಸ್ ಕಾರ್ಯಕರ್ತರು ವಶಕ್ಕೆ: ಪಕ್ಷದ ಕೇಂದ್ರ ಕಚೇರಿ ಜೆ ಪಿ ಭವನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಜೆಡಿಎಸ್ ಕಚೇರಿ ಸಮೀಪವೇ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ನಲ್ಲಿ ಕರೆದೊಯ್ದರು. ಇದಕ್ಕೂ ಮುನ್ನ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹೋಟೆಲ್ ಮೇಲೆ ದಾಳಿ: ಜಯನಗರದ ಎರಡ್ಮೂರು ಹೋಟೆಲ್‌ಗಳಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಇವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೋಟೆಲ್ ಬಂದ್ ಮಾಡಿಲ್ಲವೆಂದು ಜಯನಗರದ ಕೆಲ ಹೋಟೆಲ್‌ಗಳಿಗೆ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳ ಗುಂಪು ಪೀಠೋಪಕರಣಗಳನ್ನು ಎಸೆದು, ಹೋಟೆಲ್ ಗಾಜುಗಳನ್ನು ಜಖಂಗೊಳಿಸಿದರು. ಈ ಕಿಡಿಗೇಡಿಗಳ ಕೃತ್ಯ ಹೋಟೆಲ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಪೂರೈಸಿದ ಆಹಾರದಲ್ಲಿ ಸತ್ತ ಇಲ್ಲಿ: ಮಂಗಳವಾರ ಬೆಳಗ್ಗೆ 7:30ರ ಸುಮಾರಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಸುಮಾರು 180 ಜನ ಸಿಬ್ಬಂದಿಗೆ ಯಶವಂತಪುರದ ಹೋಟೆಲ್‌ವೊಂದರಿಂದ ಬೆಳಗಿನ ಉಪಹಾರವನ್ನು ತರಿಸಲಾಗಿತ್ತು. ತಿಂಡಿಯನ್ನು ತಿನ್ನಲು ಸಿಬ್ಬಂದಿಯೊಬ್ಬರು ಪೊಟ್ಟಣ ತೆರೆದಾಗ ಅದರಲ್ಲಿ ಸತ್ತ ಇಲಿ ಸಿಕ್ಕಿತ್ತು. ಕೂಡಲೇ ಅವರು ಇತರ ಸಿಬ್ಬಂದಿಯ ಗಮನಕ್ಕೆ ತಂದು ಯಾರೂ ತಿಂಡಿ ಸೇವಿಸದಂತೆ ತಿಳಿಸಿದ್ದರು. ಇದರ ಸಂಬಂಧ ಪ್ರತಿಕ್ರಿಯಿಸಿರುವ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್, ಹೋಟೆಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಅಲ್ಲದೇ, ಸಂಚಾರ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಂದ್: ಯಾವುದೇ ಅಹಿತಕರ ಘಟನೆ ನಡೆದಿಲ್ಲ - ಪೊಲೀಸ್ ಕಮಿಷನರ್ ದಯಾನಂದ ಮಾಹಿತಿ