ಬೆಂಗಳೂರು: ಫೇಸ್ಬುಕ್ ಪೋಸ್ಟ್ ವಿಚಾರವಾಗಿ ಉಂಟಾದ ಕೆಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಮತ್ತೊಂದು ದಿನ ನಿಷೇಧಾಜ್ಞೆ ವಿಸ್ತರಣೆ ಮಾಡಿ ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದು, ಹೀಗಾಗಿ ನಾಳೆ ಬೆಳಗ್ಗೆ 6ಗಂಟೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ.
ಹಿಂಸಾಚಾರ ನಡೆಯುವ ಸಾಧ್ಯತೆ ಹೆಚ್ಚಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕೆ.ಜಿ.ಹಳ್ಳಿ ಹಾಗೂ ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಆಗಸ್ಟ್ 16ರ ಬೆಳಗ್ಗೆ 6 ಗಂಟೆವರೆಗೆ ನಿಷೇದಾಜ್ಞೆಯನ್ನು ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಆಗಸ್ಟ್.11ರಂದು ನಡೆದ ದೊಡ್ಡ ಮಟ್ಟದ ಗಲಭೆ ಹಿನ್ನೆಲೆಯಲ್ಲಿ ಎರಡು ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ 16ರವರೆಗೂ ನಿಷೇದಾಜ್ಞೆ ವಿಸ್ತರಣೆ ಮಾಡಲಾಗಿದೆ. ಯಾವುದೇ ರೀತಿಯ ಪ್ರತಿಭಟನೆ, ಧರಣಿ, ಮುತ್ತಿಗೆ, ಸತ್ಯಾಗ್ರಹ, ಮೆರವಣಿಗೆ ನಡೆಸುವಂತಿಲ್ಲ. ಐದಕ್ಕಿಂತ ಹೆಚ್ಚು ಜನರು ಸೇರುವುದು, ಮೆರವಣಿಗೆ ಅಥವಾ ಸಭೆ ನಡೆಸುವುದು ಹಾಗೂ ಪಟಾಕಿ ಸಿಡಿಸುವುದು ಕಾನೂನು ಬಾಹಿರವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.