ಬೆಂಗಳೂರು : ಆನ್ಲೈನ್ ಮೂಲಕ ತರಗತಿ ನಡೆಸುವಾಗ ಕಾಲೇಜು ಆಡಳಿತ ಮಂಡಳಿ, ಹಾಗೂ ವಿದ್ಯಾರ್ಥಿಗಳು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್ ತಿಳಿಸಿದ್ದಾರೆ.
ಅಂತಿಮ ಪದವಿಯ ವಿದ್ಯಾರ್ಥಿಗಳ ಪರೀಕ್ಷೆ ನಡೆಸುವುದು, ಮೌಲ್ಯಮಾಪನ ಹಾಗೂ ಫಲಿತಾಂಶ ವಿತರಣೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಸುಮಾರು 700 ಕ್ಕೂ ಅಧಿಕ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಆನ್ಲೈನ್ ಮೂಲಕ ಪ್ರೊ. ಕೆ. ಆರ್. ವೇಣುಗೋಪಾಲ್ ಸಂವಾದವನ್ನು ಕುಲಪತಿಗಳು ನಡೆಸಿದ್ದಾರೆ.
ಆನ್ಲೈನ್ ತರಗತಿ, ಪರೀಕ್ಷೆ ಇತ್ಯಾದಿಗಳ ಕುರಿತು ಚರ್ಚೆ ನಡೆಸಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸಲು ಕ್ರಮ ವಹಿಸುವ ಬಗ್ಗೆಯೂ ಸೂಚನೆ ನೀಡಿದ್ದಾರೆ ಎಂದು ಬೆಂ.ವಿವಿ ತಿಳಿಸಿದೆ.
ZOOM (ಝೂಮ್ ) ಆ್ಯಪ್ ಬಳಸದಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಸೂಚಿಸಲಾಗಿದೆ. ಆದರೆ, ಇನ್ನು ಆ್ಯಪ್ ಬ್ಯಾನ್ ಮಾಡಿಲ್ಲ. ಹೀಗಾಗಿ ಅಗತ್ಯ ಭದ್ರತಾ ಕ್ರಮಗಳನ್ನು ಅನುಸರಿಸಿಯೇ ಆನ್ಲೈನ್ ತರಗತಿ ನಡೆಸಬೇಕು. ಅಧಿಕಾರಿಗಳ ಸಭೆಯನ್ನು ಆನ್ಲೈನ್ ಮೂಲಕ ನಡೆಸುವಾಗ ಎಚ್ಚರ ಇರಬೇಕು ಎಂದು ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.