ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ (ಎ1) ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಪೋಷಕರಿಗೆ ಇಂದು ಕಚೇರಿಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಸತತ ಐದು ಗಂಟೆಗಳ ಕಾಲ ವಿಚಾರಣೆ ಎದುರಿಸಿ ವಾಪಸ್ ತೆರಳಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಪ್ರಕಾಶ್ ತಂದೆ ಈರಪ್ಪ, ನಮ್ಮ ಮಗ 12 ವರ್ಷಗಳಿಂದ ಪ್ರತ್ಯೇಕ ಜೀವನ ನಡೆಸುತ್ತಿದ್ದಾನೆ. ಆತ ಸಿನಿಮಾ ನಿರ್ಮಾಣ, ಗ್ರಾನೈಟ್ ಉದ್ಯಮ ನಡೆಸುತ್ತಿದ್ದ. ಡ್ರಗ್ ಪ್ರಕರಣಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ. ನಮ್ಮದು ಸುಸಂಸ್ಕೃತ ಕುಟುಂಬ. ನಮ್ಮ ಮಗ ತಪ್ಪು ಮಾಡಿಲ್ಲ. ಆದರೆ, ಪ್ರಕರಣದಲ್ಲಿ ಹೆಸರು ಕೇಳಿ ಬಂದಾಗಿನಿಂದ ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ನಮ್ಮ ಸಂಪರ್ಕಕ್ಕೆ ಸಿಕ್ಕರೆ ಖಂಡಿತವಾಗಿಯೂ ಸಿಸಿಬಿ ಪೊಲೀಸರ ಮುಂದೆ ಹಾಜರುಪಡಿಸುತ್ತೇವೆ. ಹಾಗೆಯೇ ನಮ್ಮನ್ನ ಮತ್ತೆ ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.
ಶಿವಪ್ರಕಾಶ್ ಪರ ವಕೀಲೆ ಮಾತನಾಡಿ, ಮಾಧ್ಯಮದವರು ವಿನಾ ಕಾರಣ ಏನೇನೋ ಬಿಂಬಿಸುತ್ತಿದ್ದಾರೆ. ಆತ ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ಹೋರಾಟ ಮಾಡುವ ಮೂಲಕ ಪ್ರಕರಣದಿಂದ ಹೊರ ಬರುವುದಾಗಿ ತಿಳಿಸಿದರು.
ಪ್ರಕರಣ ಸದ್ದು ಮಾಡುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ಮೊಬೈಲ್ ನಂಬರ್ ಕೂಡಾ ಬದಲಾಯಿಸಿಕೊಂಡಿದ್ದಾನೆ. ತಿಂಗಳು ಕಳೆದರೂ ಸಿಸಿಬಿ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿಲ್ಲ. ಹಾಗಾಗಿ ಆತನ ಚಲನವಲನದ ಬಗ್ಗೆ ಪೋಷಕರಿಂದ ಮಾಹಿತಿ ಪಡೆದಿದ್ದಾರೆ.