ಬೆಂಗಳೂರು: ಸಚಿವ ಸ್ಥಾನಕ್ಕೆ ಆಯ್ಕೆಯಾದವರು ಹಾಗೂ ಸಚಿವ ಸ್ಥಾನ ವಂಚಿತರು ಮುಂಜಾನೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ದೌಡಾಯಿ ಸಿಎಂ ಜೊತೆ ಮಾತುಕತೆ ನಡೆಸಿದರು.
ಡಾಲರ್ಸ್ ಕಾಲೋನಿ ನಿವಾಸಕ್ಕೆ ಬಂದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಸಿಎಂಗೆ ಅಭಿನಂದಿಸಿ ಸಚಿವ ಸ್ಥಾನ ಕಲ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಇನ್ನು ಎ.ಎಸ್.ಪಾಟೀಲ್ ನಡಹಳ್ಳಿ, ವಿಶ್ವನಾಥ್, ನಂದೀಶ್ ರೆಡ್ಡಿ ಸೇರಿದಂತೆ ಸಚಿವ ಸ್ಥಾನ ವಂಚಿತರು ಕೂಡ ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದರು. ಎಲ್ಲವೂ ಹೈಕಮಾಂಡ್ ನಿರ್ಧಾರ. ಮುಂದೆ ಅವಕಾಶ ಸಿಗಲಿದೆ ಎಂದು ಆಕಾಂಕ್ಷಿಗಳಿಗೆ ಸಿಎಂ ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.
ಸಿಎಂ ಭೇಟಿ ಬಳಿಕ ಜಗದೀಶ್ ಶೆಟ್ಟರ್ ಮಾತನಾಡಿ, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಇದೇ ಮೊದಲು ಸಚಿವರಾಗ್ತಿಲ್ಲ. ಈ ಹಿಂದೆ ಬಿ.ಡಿ.ಜತ್ತಿ ಸಹ ಮಾಜಿ ಸಿಎಂ ಆದ ಮೇಲೆ ಸಚಿವರಾಗಿದ್ರು. ಇದೇನು ಹೊಸದಲ್ಲ. ಒಳ್ಳೇ ಸರ್ಕಾರ ಕೊಡುವಲ್ಲಿ ಕೆಲಸ ಮಾಡ್ತೇನೆ. ಯಾವ ಖಾತೆ ಅಂತ ನಿರ್ಧರಿಸಿಲ್ಲ ಎಂದರು.
ಒಂದು ಒಳ್ಳೆಯ ಸರ್ಕಾರ ಕೊಡೋ ನಿಟ್ಟಿನಲ್ಲಿ ಸಂಪುಟ ಸಚಿವರು ಕೆಲಸ ಮಾಡುತ್ತಾರೆ. ರಾಜ್ಯದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ನೆರೆಪೀಡಿತ ಪ್ರದೇಶಗಳಲ್ಲಿ ಎಲ್ಲಾ ಸಚಿವರು ಹೋಗಿ ಜನರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುತ್ತೇವೆ ಎಂದರು.
ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ಸಚಿವ ಸ್ಥಾನ ವಂಚಿತ ಶಾಸಕರು ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಾವು ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಕೆಲವು ವಿಚಾರಗಳಿವೆ. ಅವನ್ನು ನಾಯಕರ ಮುಂದೆ ಹೇಳ್ತೇವೆ. ನಮ್ಮ ಸಮಸ್ಯೆಗಳನ್ನು ನಾಯಕರು ಬಗೆಹರಿಸಲಿದ್ದಾರೆ ಎಂದರು.