ಬೆಂಗಳೂರು: ಒಲ್ಲೆ, ನಾನೊಲ್ಲೆ ಎನ್ನುತ್ತಲೇ ಬೆಳಗಾವಿ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಪಕ್ಷಕ್ಕೆ ಅಭ್ಯರ್ಥಿಯ ಕೊರತೆ ಎದುರಾಗಿದ್ದು, ಸತೀಶ್ ಅನಿವಾರ್ಯವಾಗಿ ಅಭ್ಯರ್ಥಿಯಾಗುವ ಸ್ಥಿತಿ ನಿರ್ಮಾಣವಾಗಿದೆ.
2004 ರಿಂದ ನಡೆದ 4 ಲೋಕಸಭಾ ಚುನಾವಣೆಯಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಸ್ಥಳೀಯ ಜನಪ್ರಿಯ ನಾಯಕರು ಹಾಗೂ ಕೇಂದ್ರದ ಸಚಿವರು ಹಾಗೂ ಸಾಕಷ್ಟು ಉತ್ತಮ ಕಾರ್ಯ ನಿರ್ವಹಿಸಿರುವ ಸುರೇಶ್ ಅಂಗಡಿ ಹಾಗೂ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಅತ್ಯಂತ ಪ್ರಬಲವಾಗಿ ಬೆಳೆದು ಬೇರೂರಿರುವ ಬಿಜೆಪಿಗೆ ಪಚುನಾವಣೆ ಗೆಲುವು ಅತ್ಯಂತ ಸುಲಭದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸುರೇಶ್ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದರೆ ಹೆಚ್ಚು ಅಂತರದ ಗೆಲುವು ಲಭಿಸಲಿದೆ. ಇದರ ಬದಲು ಹೊಸ ಮುಖಕ್ಕೆ ಅವಕಾಶ ನೀಡಿದರೆ ಗೆಲುವಿನ ಅಂತರ ಕಡಿಮೆಯಾದರೂ ಮುಂದಿನ ಲೋಕಸಭೆಗೆ ಕ್ಷೇತ್ರದಲ್ಲಿ ಅಭ್ಯರ್ಥಿಗೆ ಅಸ್ತಿತ್ವ ಕಂಡುಕೊಳ್ಳಲು ಅನುಕೂಲವಾಗಲಿದೆ ಎಂಬ ಎರಡು ರೀತಿಯ ಮಾತುಗಳು ಬಿಜೆಪಿ ಪಾಳೆಯದಿಂದ ಕೇಳಿ ಬರುತ್ತಿವೆ. ಒಟ್ಟಾರೆ ಆಯ್ಕೆ ಯಾವುದೇ ಇರಲಿ, ಗೆಲುವು ಬಿಜೆಪಿ ಪರವಾಗಿಯೇ ಇದೆ ಪಕ್ಷದ ನಾಯಕರ ಅಭಿಪ್ರಾಯ.
ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಬಹುತೇಕ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಇದಲ್ಲದೆ ಕಾಂಗ್ರೆಸ್ ಪಕ್ಷ ಸಹ ಪ್ರತಿ ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಅಂಗಡಿ ವಿರುದ್ಧ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರಯೋಗಿಸುವ ವಿಫಲಯತ್ನ ನಡೆಸಿದೆ. ಈ ಪ್ರಯತ್ನದಿಂದಾಗಿ ಅಂಗಡಿ ಗೆಲುವಿನ ಅಂತರ ಕೂಡ ಹೆಚ್ಚಾಗುತ್ತಾ ಸಾಗಿದೆ.
ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಇದೀಗ ಹಿಂದುಳಿದ ವರ್ಗದ ಪ್ರಮುಖ ನಾಯಕ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಸೂಕ್ತ ಅಭ್ಯರ್ಥಿಯ ಕೊರತೆ ಹಾಗೂ ವಿಫಲ ಪ್ರಯೋಗಗಳ ಫಲವಾಗಿ ಕಾಂಗ್ರೆಸ್ಗೆ ಗೆಲುವಿನ ನಿರೀಕ್ಷೆ ಹುಟ್ಟಿಸುವ ವ್ಯಕ್ತಿ ಸಿಗುತ್ತಿಲ್ಲ. ಬಹು ಹುಡುಕಾಟದ ನಂತರ ಇದೀಗ ಅಂತಿಮವಾಗಿ ಪಕ್ಷಕ್ಕೆ ಸತೀಶ್ ಜಾರಕಿಹೊಳಿ ಸ್ಪರ್ಧೆ ಅನಿವಾರ್ಯವಾಗಿ ಪರಿಣಮಿಸಿದೆ.
ಕಣಕ್ಕಿಳಿಯುವುದಿಲ್ಲ ಎಂದು ಎಷ್ಟೇ ಹೇಳಿದರೂ ಪಕ್ಷದ ಮುಖಂಡರು ಸತೀಶ್ ಜಾರಕಿಹೊಳಿ ಮಾತನ್ನ ಕೇಳಿಸಿಕೊಳ್ಳುತ್ತಿಲ್ಲ. ಚುನಾವಣೆ ಅಂದಾಕ್ಷಣ ಸಾಕಷ್ಟು ಹಣ ಖರ್ಚಾಗುತ್ತದೆ. ಗೆಲುವು ದಕ್ಕುವುದಿಲ್ಲ ಎಂಬ ಅರಿವಿದ್ದೂ ಹಣ ಖರ್ಚು ಮಾಡಲು ಸತೀಶ್ ಜಾರಕಿಹೊಳಿ ಕೂಡ ಹಿಂದೇಟು ಹಾಕುತ್ತಿದ್ದಾರೆ. ಆದರೆ ಇವರ ಜನಪ್ರಿಯತೆ ಅನಿವಾರ್ಯವಾಗಿ ಕಣಕ್ಕಿಳಿಸುವಂತೆ ಮಾಡುತ್ತಿದೆ. ಬೆಳಗಾವಿಯ ಸಾವುಕಾರ್ ಕುಟುಂಬ ಎಂದೇ ಕರೆಸಿಕೊಳ್ಳುವ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಕಣಕ್ಕಿಳಿದರೆ ಬಿಜೆಪಿಯಲ್ಲಿರುವ ಅವರ ಕುಟುಂಬ ಸದಸ್ಯರು ಪ್ರಚಾರದ ವಿಚಾರದಲ್ಲಿ ಕೊಂಚ ಹಿಂದೆ ಸರಿಯಬಹುದು ಎಂಬ ಲೆಕ್ಕಾಚಾರ ಕೂಡ ಕಾಂಗ್ರೆಸ್ ನಾಯಕರದ್ದಾಗಿದೆ.
2004 ಮತ್ತು 2009ರಲ್ಲಿ ಮಾಜಿ ಸಂಸದ ಅಮರಸಿಂಗ್ ವಸಂತರಾವ್ ಪಾಟೀಲ್, 2013ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ 2019ರಲ್ಲಿ ವಿ ಎಸ್ ಸಾಧುನವರ್ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಸತೀಶ್ ಜಾರಕಿಹೊಳಿಗೆ ಮಣೆ ಹಾಕಲು ಮುಂದಾಗಿದೆ. ಸೂಕ್ತ ಅಭ್ಯರ್ಥಿಯ ಕೊರತೆ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಆಯ್ಕೆ ಅನಿವಾರ್ಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಮಧ್ಯೆ ಶತಾಯಗತಾಯ ಸ್ಪರ್ಧೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸತೀಶ್ ಜಾರಕಿಹೊಳಿ ಈಗ ಅಂತಿಮ ಪ್ರಯತ್ನವಾಗಿ ದಿಲ್ಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಭೇಟಿ ಮಾಡಿ ಚರ್ಚಿಸಲು ಮುಂದಾಗಿದ್ದಾರೆ. ಅಲ್ಲಿಯೂ ಇವರೇ ಅಭ್ಯರ್ಥಿಯಾಗಬೇಕೆಂಬ ಒತ್ತಡ ಮೂಡಿ ಬಂದರೆ ಸ್ಪರ್ಧೆ ಅನಿವಾರ್ಯವಾಗಲಿದೆ. ಇಂಥಹದ್ದೇ ಪರಿಸ್ಥಿತಿ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕಿದೆ ಎನ್ನಲಾಗ್ತಿದೆ.
ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯೋಗದ ಮೂಲಕ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷ ಬೆಳಗಾವಿ ಕ್ಷೇತ್ರದಲ್ಲಿ ತನ್ನ ಹಿಡಿತ ಕಳೆದುಕೊಂಡಿದ್ದು, ಈ ಬಾರಿ ಉಪಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಕಡಿಮೆ ಇದ್ದರೂ ಸಹ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಓದಿ: ಹೈಕಮಾಂಡ್ ಹೇಳಿದ್ರೆ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧ: ಸತೀಶ್ ಜಾರಕಿಹೊಳಿ