ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪದಡಿ ದಾಖಲಿಸಿರುವ ಪ್ರಕರಣ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಹಾಗೂ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಕೈಗೊಂಡಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕ ಸತೀಶ್ ಸೈಲ್, ಜನಾರ್ಧನ ರೆಡ್ಡಿ ಬಂಟ ಖಾರದಪುಡಿ ಮಹೇಶ್ ಹಾಗೂ ಬಂದರು ಕನ್ಸರ್ವೇಟರ್ ಮಹೇಶ್ ಬಿಲಿಯೆ ಸೇರಿದಂತೆ 18 ಮಂದಿ ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಅದಿರನ್ನು ಅಕ್ರಮವಾಗಿ ಖರೀದಿಸಿದ್ದ ಆರೋಪಿತರು, ನಾವು ಕೇವಲ ವ್ಯಾಪಾರ ಮಾಡಿದ್ದೇವೆ. ನಮಗೆ ಅದಿರು ಅಕ್ರಮ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ವಾದಿಸಿದ್ದರು. ಹಾಗೆಯೇ ಅದಿರು ಸಾಗಣೆ ಮಾಡಿದ್ದವರು ಕೋರ್ಟ್ ಜಪ್ತಿ ಮಾಡುವ ಮುನ್ನವೇ ಅದಿರು ಮಾರಾಟ ಮಾಡಿದ್ದೆವು ಎಂದು ವಾದಿಸಿದ್ದರು.
ಸಿಬಿಐ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಸುಮಾರು 8 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದೆ. 2010ರ ಮಾರ್ಚ್ 26ರಂದು ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಅದಿರು ಸಾಗಿಸುತ್ತಿರುವ ಕುರಿತು ಅಂಕೋಲ ಜೆಎಂಎಫ್ಸಿ ಕೋರ್ಟ್ ಗೆ ದೂರು ಸಲ್ಲಿಸಿದ್ದರು.
ಈ ಸಂಬಂಧ ಅಂಕೋಲ ನ್ಯಾಯಾಲಯ ಪೋರ್ಟ್ ಕನ್ಸರ್ವೇಟರ್ ಮಹೇಶ್ ಬಿಲಿಯೆಗೆ ಅದಿರು ರಕ್ಷಿಸುಂತೆ ಸೂಚಿಸಿತ್ತು. ಹೀಗಿದ್ದೂ ಆರೋಪಿತರೆಲ್ಲರೂ ಸೇರಿ ಲಕ್ಷಾಂತರ ಮೆಟ್ರಿಕ್ ಟನ್ ಅದಿರನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ. ಹೀಗಾಗಿ ಆರೋಪಿಗಳ ಮನವಿಯನ್ನು ಪರಿಗಣಿಸಬಾರದು ಎಂದು ಅಂಕಿ ಅಂಶಗಳ ಸಹಿತ ವಾದ ಮಂಡಿಸಿದ್ದರು. ಸಿಬಿಐ ಪರ ವಕೀಲರ ವಾದ ಪರಿಗಣಿಸಿದ ಪೀಠ ಎಲ್ಲಾ 18 ಮಂದಿ ಆರೋಪಿತರ ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.