ಬೆಳಗಾವಿ: ಜಿಲ್ಲೆಯಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 12ಕ್ಕೇರಿದೆ. ಮಹಿಳೆಯ ಹೇಳಿಕೆ ಮತ್ತು ದೂರಿನ ಪ್ರಕಾರ ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜಪ್ಪ ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಅವರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಈ ಮೂವರು ತಲೆ ಮರೆಸಿಕೊಂಡಿದ್ದರು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪುತ್ರನ ಪ್ರೇಯಸಿಯ ತಾಯಿ, ತಂದೆ, ಚಿಕ್ಕಪ್ಪ, ಸಹೋದರರು ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಇಂದು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಒಟ್ಟು ಇಲ್ಲಿಯವರೆಗೆ 12 ಆರೋಪಿಗಳನ್ನು ಬಂಧಿಸಲಾಗಿದ್ದು, ಬಸಪ್ಪ ರುದ್ರಪ್ಪ ನಾಯಿಕ, ರಾಜು ರುದ್ರಪ್ಪ ನಾಯಿಕ, ಕೆಂಪಣ್ಣ ರಾಜು ನಾಯಿಕ, ಪಾರ್ವತಿ ಬಸಪ್ಪ ನಾಯಿಕ, ಯಲ್ಲಪ್ಪ ರುದ್ರಪ್ಪ ನಾಯಿಕ, ಲಕ್ಕಪ್ಪ ರುದ್ರಪ್ಪ ನಾಯಿಕ, ಗಂಗವ್ವ ಬಸಪ್ಪ ವಾಲಿಕಾರ, ಸಂಗೀತಾ ಸದಾಶಿವ ಹೆಗ್ಗನಾಯಿಕ, ಪ್ರದೀಪ ಬಸಪ್ಪ ನಾಯಿಕ, ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜಪ್ಪ ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೊಲೀಸ್ ಅಧಿಕಾರಿ ಅಮಾನತು: ಇಲ್ಲಿಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ ಸಿನ್ನೂರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಎಸ್ಎನ್ ಸಿದ್ದರಾಮಪ್ಪ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್ ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಸರ್ಕಾರಕ್ಕೆ ಮತ್ತು ಪೊಲೀಸ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು ಕಾಕತಿ ಸಿಪಿಐ ವಿಜಯಕುಮಾರ ಸಿನ್ನೂರ ಅವರನ್ನು ಅಮಾನತು ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಯುವಕನೋರ್ವ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿ ಊರಿನಿಂದ ಓಡಿಹೋದ ಕಾರಣಕ್ಕೆ ದುಷ್ಕರ್ಮಿಗಳು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ನಂತರ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಡಿಸೆಂಬರ್ 11ರಂದು ನಡೆದಿತ್ತು. ಈ ಸಂಬಂಧ ಈಗಾಗಲೇ 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಓದಿ: ಬೆಳಗಾವಿ ಮಹಿಳೆ ಹಲ್ಲೆ ಪ್ರಕರಣ ಸಹಿಸಲಾಗದ ದುಷ್ಕೃತ್ಯ: ಬಿಜೆಪಿ ಪ್ರತಿಭಟನೆಯಲ್ಲಿ ಡಿವಿಎಸ್ ಆಕ್ರೋಶ