ಬೆಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲಿ ಇತರ ಕಂಪನಿಗಳು ಕೆಲಸಗಾರರನ್ನು ತೆಗೆದು ಹಾಕಬಾರದೆಂಬ ಸರ್ಕಾರದ ನಿಯಮವನ್ನು ಸರ್ಕಾರದ ಸ್ಥಳೀಯ ಸಂಸ್ಥೆಯೇ ಉಲ್ಲಂಘಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 20 ಜನರನ್ನು ತೆಗೆದುಹಾಕಿದೆ.
ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರನ್ನು, ಅದರಲ್ಲೂ ಹತ್ತು ವರ್ಷಕ್ಕಿಂತ ಅಧಿಕವಾಗಿ ಬಿಡಿಎಗೆ ದುಡಿದವರನ್ನು ಏಕಾಏಕಿ ಕೈಬಿಟ್ಟಿದೆ. ಸ್ಟ್ರಾಟೆಜಿಕ್ ಸರ್ವಿಸಸ್ ಕಂಪನಿಯ ಮೂಲಕ ಕೆಲಸಕ್ಕೆ ಸೇರಿಕೊಂಡವರಿಗೆ ಇದೇ 25ರಿಂದ ಕೆಲಸಕ್ಕೆ ಬರಬೇಕಾಗಿಲ್ಲ ಎಂಬ ಮೇಲ್ಗಳು ಬಂದಿವೆ. ಡಾಟಾ ಆಪರೇಟರ್ಸ್ ಆಗಿ ದುಡಿಯುತ್ತಿದ್ದ, ಕೆಲಸದ ಅನಿವಾರ್ಯದಿಂದ ದುಡಿಯುತ್ತಿದ್ದವರು, ಮಹಿಳಾ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕೋವಿಡ್ ಸಮಯದಲ್ಲಿ ಹೊಸ ಕೆಲಸವೂ ಸಿಗದೇ ಕಷ್ಟಕ್ಕೆ ಸಿಲುಕುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಟ್ರಾಟಜಿಕ್ ಸರ್ವಿಸಸ್ ಕಂಪನಿ, ಕೆಲವು ಸಿಬ್ಬಂದಿಯನ್ನು ಬಿಡಿಎ ಕೆಲಸದಿಂದ ಕೈಬಿಟ್ಟುದ್ದು ನಿಜ, ಬಿಡಿಎ ಸೂಚನೆ ಮೇರೆಗೆ ಕೈಬಿಡಲಾಗಿದೆ. ಕೆಲವರು ಕಚೇರಿ ಕಾರ್ಯಗಳಿಗೆ ಅವಶ್ಯಕ ಕೌಶಲ್ಯ ಹೊಂದಿಲ್ಲ ಎಂಬ ಕಾರಣ ಬಿಡಿಎ ನೀಡಿದೆ ಎಂದರು.
ಈ ಬಗ್ಗೆ ಬಿಡಿಎ ಉಪಕಾರ್ಯದರ್ಶಿ ಮಧು ಪ್ರತಿಕ್ರಿಯಿಸಿ, ಔಟ್ ಸೋರ್ಸ್ ಮೂಲಕ ಬಂದ ಡಾಟಾ ಆಪರೇಟರ್ಗಳ ಪೈಕಿ ಕೆಲವರ ಕೆಲಸ ತೃಪ್ತಿಕರವಾಗಿಲ್ಲ, ಅಷ್ಟೇ ಅಲ್ಲ ಸಾರ್ವಜನಿಕರಿಂದ ದೂರು ಕೂಡಾ ಕೇಳಿ ಬಂದಿದೆ. ಹೀಗಾಗಿ ಅವರನ್ನು ವಾಪಸ್ ಪಡೆಯುವಂತೆ ಏಜೆನ್ಸಿಗೆ ಸೂಚಿಸಲಾಗಿದೆ ಎಂದಿದ್ದಾರೆ.