ಬೆಂಗಳೂರು: ಸುಪ್ರೀಂಕೋರ್ಟ್ ನೀಡಿರುವ ಆದೇಶದನ್ವಯ ಉದ್ದೇಶಿತ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ಡಾ.ಮಹದೇವ್ ಅವರೊಂದಿಗೆ ರಾಜ್ಯ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಇತರ ರೈತ ಮುಖಂಡರ ಜತೆ ನಡೆಸಿದ ಸಮಾಲೋಚನೆ ಸಭೆಯಲ್ಲಿ ಈ ಸ್ಪಷ್ಟನೆ ನೀಡಿದರು.
ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಇತರ ರೈತ ಮುಖಂಡರು ಮಾತನಾಡಿ, ಯೋಜನೆಯಿಂದ ರೈತರು ಮತ್ತು ಸ್ಥಳೀಯರಿಗೆ ಸಮಸ್ಯೆಗಳು ಎದುರಾಗುತ್ತವೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಬೇಕೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಈಗಾಗಲೇ ಸುಪ್ರೀಂಕೋರ್ಟ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಮತ್ತು ಉದ್ದೇಶಿತ ಬಡಾವಣೆಯಲ್ಲಿ 2018 ರ ಆಗಸ್ಟ್‌ಗೂ ಮುನ್ನ ನಿರ್ಮಾಣವಾಗಿರುವ ಮನೆಗಳ ಸಮೀಕ್ಷೆ ನಡೆಸುವಂತೆ ಉನ್ನತಾಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಆದೇಶದ ಹಿನ್ನೆಲೆ ಸಮಿತಿಯು ಕಳೆದ ಹಲವು ತಿಂಗಳಿಂದ ನಿರಂತರವಾಗಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿದೆ. ಮುಂದಿನ ಕೆಲವು ತಿಂಗಳಲ್ಲಿ ಸುಪ್ರೀಂಕೋರ್ಟ್ಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಇದರ ಆಧಾರದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಲಿದೆ ಎಂದು ತಿಳಿಸಿದರು.
ದಾಖಲೆ ನೀಡುವಂತೆ ಮನವಿ
ಉದ್ದೇಶಿತ ಬಡಾವಣೆಯಲ್ಲಿ ನಿರ್ಮಾಣ ಮಾಡಿರುವ ಮನೆಗಳ ಬಗ್ಗೆ ಸಮಿತಿಯೇ ನಿರ್ಧಾರ ಕೈಗೊಂಡು ಸುಪ್ರೀಂಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಈ ವಿಚಾರದಲ್ಲಿ ಬಿಡಿಎನ ಯಾವುದೇ ಹಸ್ತಕ್ಷೇಪ ಅಥವಾ ಪ್ರಭಾವ ಇರುವುದಿಲ್ಲ. ಈ ಹಿನ್ನೆಲೆ ಬಡಾವಣೆ ವ್ಯಾಪ್ತಿಯ ಮೂರ್ನಾಲ್ಕು ಸ್ಥಳಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳಿಗೆ ತೆರಳಿ ನಾಗರಿಕರು ತಮ್ಮ ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಎಂದು ವಿಶ್ವನಾಥ್ ಮನವಿ ಮಾಡಿದರು.
ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧ
ಬಡಾವಣೆಯಲ್ಲಿರುವ ಮನೆಗಳಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ. ಈ ತೀರ್ಪಿಗೆ ಅನುಗುಣವಾಗಿ ಬಿಡಿಎ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ನಿವೇಶನ ಖರೀದಿ, ಮನೆ ನಿರ್ಮಾಣ ಬೇಡ
ಸುಪ್ರೀಂಕೋರ್ಟ್ ಆದೇಶ ಇದ್ದಾಗ್ಯೂ, ಕೆಲವು ಡೆವಲಪರ್ಗಳು ಅಮಾಯಕ ಸಾರ್ವಜನಿಕರಿಗೆ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಮನೆ ನಿರ್ಮಾಣ ಮಾಡಿದರೆ ತಮ್ಮ ನಿವೇಶನ ಉಳಿಯುತ್ತದೆ ಎಂಬ ಭಾವನೆಯಿಂದ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಸುಪ್ರೀಂಕೋರ್ಟ್ ನೀಡಿರುವ ಕಾಲಮಿತಿ ಹೊರತುಪಡಿಸಿ ನಿರ್ಮಾಣವಾಗುವ ಮನೆಗಳನ್ನು ಆದೇಶದಂತೆ ಬಿಡಿಎ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆ ಯಾರೂ ಸಹ ಮುಂದಿನ ಆದೇಶದವರೆಗೆ ಮನೆಗಳನ್ನು ನಿರ್ಮಾಣ ಮಾಡುವುದಾಗಲೀ ಅಥವಾ ನಿವೇಶನ ಖರೀದಿ ಮಾಡಬಾರದು ಎಂದು ವಿಶ್ವನಾಥ್ ಮನವಿ ಮಾಡಿದರು.