ಬೆಂಗಳೂರು: ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿ ನಿರ್ಮಿಸಿರುವ ಫ್ಲ್ಯಾಟ್‌ಗಳನ್ನು ರಿಯಾಯಿತಿ ದರದಲ್ಲಿ ಬೆಂಗಳೂರು ವಕೀಲರ ಸಂಘದ ಸದಸ್ಯರಿಗೆ ಮಾರಾಟ ಮಾಡಲು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಿರ್ಧರಿಸಿದೆ. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ನಿಯೋಗ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಕುಮಾರ್ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಿತು.
ಇದೇ ವೇಳೆ ಮಾತನಾಡಿದ ಎಸ್.ಆರ್.ವಿಶ್ವನಾಥ್, ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿನ ಕನಿಷ್ಠ 100 ಫ್ಲ್ಯಾಟ್‌ಗಳನ್ನು ಖರೀದಿ ಮಾಡಲು ಮುಂದೆ ಬಂದಿದ್ದು, ಬಿಡಿಎಗೆ ಆರ್ಥಿಕ ಹೊರೆ ಆಗದ ರೀತಿಯಲ್ಲಿ ವಕೀಲರ ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ ನಿರ್ಧಾರದಂತೆ ವಕೀಲರ ಸಂಘದ ಸದಸ್ಯರು ನಿಗದಿತ ಸಮಯದೊಳಗೆ ಫ್ಲ್ಯಾಟ್‌ಗಳನ್ನು ಖರೀದಿಸಬೇಕಾಗಿದೆ ಎಂದು ತಿಳಿಸಿದರು.
ಫ್ಲ್ಯಾಟ್ ಖರೀದಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲು ಬಿಡಿಎ ಸಿಬ್ಬಂದಿಯನ್ನು ವಕೀಲರ ಸಂಘದ ಕಚೇರಿಯಲ್ಲಿ ನಿಯೋಜಿಸಲಾಗುತ್ತದೆ. ಫ್ಲ್ಯಾಟ್ ಆಯ್ಕೆ ಮತ್ತು ಇತರೆ ಮಾಹಿತಿಗಳನ್ನು ಸಂಘದ ಸದಸ್ಯರಿಗೆ ನೀಡಲಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ಫ್ಲ್ಯಾಟ್ ನೀಡುವಂತೆ ನಮ್ಮ ಸಂಘ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿರುವ ವಿಶ್ವನಾಥ್ ಮತ್ತು ಬಿಡಿಎ ಆಯುಕ್ತ ಕುಮಾರ್ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಅಲ್ಲದೇ, ಬಿಡಿಎ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ಫ್ಲ್ಯಾಟ್ ಖರೀದಿಸುವ ಪ್ರಕ್ರಿಯೆಯನ್ನು ಸಂಘದ ವತಿಯಿಂದ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ :ಬಿಡಿಎ ನಿರ್ಮಾಣ ಮಾಡಿರೋ ಫ್ಲ್ಯಾಟ್‌ಗಳನ್ನು ಕೇಳೋರೇ ಇಲ್ಲ: ಸಾವಿರಾರು ಕೋಟಿ ರೂ. ನಷ್ಟ ಭೀತಿ