ಬೆಂಗಳೂರು: ಪರಿಹಾರದ ಮೊತ್ತ ಪಾವತಿಸಲು ಲಂಚಕ್ಕೆ ಬೇಡಿಕೆಯಿಟ್ಟ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಬಿಡಿಎ ಎಇಇ ಬಿ.ಟಿ. ರಾಜು ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
2008ರಲ್ಲಿ ಸುವಾಲಾಲ್ ಜೈನ್ ಮತ್ತು ಸುರೇಶ್ ಜೈನ್ ಎಂಬುವವರ ಮಾಲೀಕತ್ವದಲ್ಲಿ ಕೆಂಗೇರಿ ಬಳಿಯಿದ್ದ 6 ಎಕರೆ 33 ಗುಂಟೆ ಜಮೀನನ್ನು ರಸ್ತೆ ಕಾಮಗಾರಿಗಾಗಿ ಬಿಡಿಎ ಬಳಕೆ ಮಾಡಿಕೊಂಡಿತ್ತು. ಪರಿಹಾರಕ್ಕಾಗಿ ಸುವಾಲಾಲ್ ಜೈನ್ ಮತ್ತು ಸುರೇಶ್ ಜೈನ್ ಅರ್ಜಿ ಸಲ್ಲಿಸಿದ್ದರು. ಆದರೆ 12 ವರ್ಷದಿಂದ ಅರ್ಜಿ ಸಲ್ಲಿಸುತ್ತ ಬಂದರೂ ಇದುವರೆಗೂ ಬಿಡಿಎದಿಂದ ಪರಿಹಾರ ಸಂದಾಯವಾಗಿರಲಿಲ್ಲ.
ಈ ನಡುವೆ ಹಣ ಪಾವತಿಸಲು ಎಇಇ ಬಿ.ಟಿ. ರಾಜು ಒಂದು ಕೋಟಿ ರೂಪಾಯಿ ಲಂಚದ ಕೇಳಿದ್ದಾರೆ ಎನ್ನಲಾಗಿದೆ. ಮುಂಗಡವಾಗಿ ಮಂಗಳವಾರ ಐದು ಲಕ್ಷ ರೂ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ರಾಜುರನ್ನ ವಶಕ್ಕೆ ಪಡೆದಿರುವ ಎಸಿಬಿ ತಂಡ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದೆ.
ಇದನ್ನೂ ಓದಿ: ರೈತನಿಂದ ಹಣ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಎಂಜಾಯ್ ಮಾಡಿದ್ದ ಯುವಕರು ಅರೆಸ್ಟ್