ಬೆಂಗಳೂರು: ನಗರ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದೇ ಮೊದಲ ಬಾರಿಗೆ ಪ್ರತಿ ಮನೆಗೆ ಅಗತ್ಯವಾಗಿರುವ ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ಆಪ್ಟಿಕಲ್ ಕೇಬಲ್ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಸಂಪರ್ಕಗಳನ್ನು ಅಂಡರ್ ಗ್ರೌಂಡ್ನಲ್ಲಿ ಕಲ್ಪಿಸಲು ನಿರ್ಧರಿಸಿದೆ.
ನಿರ್ಮಾಣ ಹಂತದಲ್ಲಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪ್ರತಿ ನಿವೇಶನಕ್ಕೂ ಈಗಾಗಲೇ ಈ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ಬಿಡಿಎ ಉಸ್ತುವಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬೆನ್ನಲ್ಲೇ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಶುಕ್ರವಾರ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಂಪೇಗೌಡ ಬಡಾವಣೆಯ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ಕೆಂಪೇಗೌಡ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅದರಂತೆ ಬಡಾವಣೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಬಿಡಿಎ ಬಡಾವಣೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರು ಮನೆ ಕಟ್ಟುವ ಮುನ್ನವೇ ಅವರ ಮನೆಗಳಿಗೆ ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಇಲ್ಲಿ ನಿವೇಶನ ಖರೀದಿ ಮಾಡುವ ನಾಗರಿಕರು ಮನೆ ನಿರ್ಮಾಣಕ್ಕೆ ಮುನ್ನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸ್ವಂತ ಬೋರ್ವೆಲ್ ಕೊರೆಸುವ ಅಗತ್ಯವಿರುವುದಿಲ್ಲ. ಏಕೆಂದರೆ ಖರೀದಿಸುವ ಮುನ್ನವೇ ಪ್ರತಿ ನಿವೇಶನಕ್ಕೂ ನೀರಿನ ಸಂಪರ್ಕವನ್ನು ಕಲ್ಪಿಸಿರಲಾಗಿರುತ್ತದೆ ಎಂದು ಹೇಳಿದರು.
ರಸ್ತೆ ಅಗೆಯುವುದಕ್ಕೆ ಕಡಿವಾಣ: ಸಾಮಾನ್ಯವಾಗಿ ಪ್ರತಿ ಮನೆ ನಿರ್ಮಾಣವಾದ ಸಂದರ್ಭದಲ್ಲಿಯೂ ಅಲ್ಲಿಗೆ ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೇರಿದಂತೆ ಇನ್ನಿತರೆ ಸಂಪರ್ಕಗಳಿಗೆಂದು ರಸ್ತೆಗಳನ್ನು ಅಗೆಯುವ ಪರಿಪಾಠ ಎಲ್ಲಾ ಕಡೆ ಇದೆ. ಆದರೆ, ಈ ಬಡಾವಣೆಯಲ್ಲಿ ಅಂತಹ ಯಾವುದೇ ಪ್ರಮೇಯ ಉದ್ಭವವಾಗುವುದಿಲ್ಲ. ಅಕ್ಕಪಕ್ಕದ ಎರಡು ನಿವೇಶನಗಳ ಮಧ್ಯೆ ಪೈಪ್ ಲೈನ್ ಡಕ್ಟ್ಗೆ ಛೇಂಬರ್ ನಿರ್ಮಾಣ ಮಾಡಲಾಗಿರುತ್ತದೆ. ಇದರ ಮೂಲಕ ಯಾವುದೇ ದುರಸ್ತಿ ಅಥವಾ ಸಂಪರ್ಕವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಬೀದಿ ದೀಪಗಳಿಗೆ ಮಾತ್ರ ಕಂಬದ ವ್ಯವಸ್ಥೆ: ಈ ಬಡಾವಣೆ ಸುಸಜ್ಜಿತವಾಗಿರಲಿದ್ದು, ಇಲ್ಲಿ ಪ್ರತಿಯೊಂದು ಮನೆಗೂ ಅಂಡರ್ ಗ್ರೌಂಡ್ ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ. ರಸ್ತೆಗಳ ಇಕ್ಕೆಲಗಳಲ್ಲಿ ಬೀದಿ ದೀಪಗಳಿಗೆ ಮಾತ್ರ ಕಂಬಗಳನ್ನು ಅಳವಡಿಸಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಬಾರದಿರಲಿ ಎಂಬ ದೃಷ್ಟಿಯಿಂದ ಭವಿಷ್ಯದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ಬೃಹತ್ ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೂರು ಹಂತಗಳಲ್ಲಿ ನೀರು ಸಂಸ್ಕರಣೆ ಮಾಡಿ ಓವರ್ ಹೆಡ್ ಟ್ಯಾಂಕ್ ಮೂಲಕ ಮನೆಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದರು.
ಗುತ್ತಿಗೆದಾರರಿಗೆ ಎಚ್ಚರಿಕೆ: ವಿಳಂಬ ಮಾಡದೇ ನಿಗದಿತ ಸಮಯದಲ್ಲಿ ಕೆಂಪೇಗೌಡ ಬಡಾವಣೆಯನ್ನು ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಗುತ್ತಿಗೆದಾರರು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಮಗೆ ವಹಿಸಿಕೊಟ್ಟಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದರು.
ರೈತರಿಗೆ ಭರವಸೆ: ಬಡಾವಣೆಗೆಂದು ಭೂಮಿ ನೀಡಿರುವ ರೈತರೊಂದಿಗೆ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಸಭೆ ನಡೆಸಿದರು. 2 ತಿಂಗಳ ಹಿಂದೆ ಬಡಾವಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಸಲ್ಲಿಸಿದ್ದ ಸಮಸ್ಯೆಗಳನ್ನು ಬಹುತೇಕ ಪರಿಹರಿಸಲಾಗಿದೆ. ಇನ್ನುಳಿದ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕೋರ್ಟ್ನಿಂದ ಹೊರಗೆ ಇತ್ಯರ್ಥಕ್ಕೆ ಮನವಿ: ಪರಿಹಾರ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲ ರೈತರು ಬಿಡಿಎ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಬಡಾವಣೆ ನಿರ್ಮಾಣಕ್ಕೆ ಹಿನ್ನಡೆ ಆಗುತ್ತಿರುವುದರಿಂದ ನ್ಯಾಯಾಲಯದಿಂದ ಹೊರಗೆ ವ್ಯಾಜ್ಯ ಬಗೆಹರಿಸಿಕೊಂಡರೆ ಪ್ರಾಧಿಕಾರದ ಕಡೆಯಿಂದ ನಿಯಮಾನುಸಾರ ಪರಿಹಾರ ಮತ್ತು ನೆರವು ನೀಡಲಾಗುತ್ತದೆ ಎಂದು ಅಧ್ಯಕ್ಷರು ಮತ್ತು ಆಯುಕ್ತರು ತಿಳಿಸಿದರು.
ವಾಹನ ಸಂಚಾರವಿದ್ದರೆ ಮಾತ್ರ ಲೈಟ್ಸ್ ಆನ್: ಬಡಾವಣೆಯಲ್ಲಿ ವಿದ್ಯುತ್ ಉಳಿತಾಯ ಯೋಜನೆಯನ್ನೂ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ವಿಶೇಷತೆಯೆಂದರೆ ರಾತ್ರಿ ವೇಳೆ ರಸ್ತೆಗಳಲ್ಲಿ ವಾಹನಗಳು ಅಥವಾ ಜನರ ಸಂಚಾರವಿದ್ದರೆ ಮಾತ್ರ ಬೀದಿ ದೀಪಗಳು ಆನ್ ಆಗುತ್ತವೆ. ಇಂತಹ ಪ್ರಾಯೋಗಿಕ ವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತರಲಾಗುತ್ತಿದೆ.
ಸೂಪರ್ವೈಸರಿ ಕಂಟ್ರೋಲ್ & ಡೇಟಾ ಅಕ್ವಿಸಿಷನ್ ಸಿಸ್ಟಂ: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಬಡಾವಣೆ ಯೋಜನೆಯೊಂದರಲ್ಲಿ 'ಸ್ಕಾಡಾ ಸಿಸ್ಟಂ' ಅಂದರೆ ಸೂಪರ್ವೈಸರಿ ಕಂಟ್ರೋಲ್ & ಡೇಟಾ ಅಕ್ವಿಸಿಷನ್ ಸಿಸ್ಟಂ ಅಳವಡಿಸಲಾಗುತ್ತಿದೆ. ಬಡಾವಣೆಯಲ್ಲಿ ಯಾವುದೇ ಪ್ರದೇಶದಲ್ಲಿ ವಿದ್ಯುತ್ ಅಥವಾ ನೀರಿನ ಪೂರೈಕೆಯಲ್ಲಿ ಲೋಪದೋಷಗಳು ಕಂಡು ಬಂದರೆ ಈ ವ್ಯವಸ್ಥೆ ಮೂಲಕ ಪತ್ತೆಯಾಗುತ್ತದೆ. ಕೂಡಲೇ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ.
ಈ ವ್ಯವಸ್ಥೆಯನ್ನು ವಿಭಾಗವಾರು, ಬ್ಲಾಕ್ವಾರು ಅಳವಡಿಸಲಾಗಿರುತ್ತದೆ. ಇದಲ್ಲದೇ, ಯಾವುದೇ ಬೀದಿಯಲ್ಲಿ ಅಥವಾ ಮನೆಗಳ ಸಾಲಿನಲ್ಲಿ ನಿರಂತರವಾಗಿ ನೀರು ಪೋಲಾಗುತ್ತಿದ್ದರೆ ಈ ವ್ಯವಸ್ಥೆಯಿಂದ ಅದು ತಿಳಿಯುತ್ತದೆ. ಈ ಬಗ್ಗೆ ಮಾತನಾಡಿದ ಬಿಡಿಎ ಆಯುಕ್ತ ರಾಜೇಶ್ ಗೌಡ, ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಬಡಾವಣೆಯ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಮತ್ತು ಆದಷ್ಟು ಕಡಿಮೆ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಡಿಎ ಅಧಿಕಾರಿಗಳಾದ ವಾಸಂತಿ ಅಮರ್, ಶಾಂತರಾಜಣ್ಣ, ರೈತ ಮುಖಂಡ ಚನ್ನಪ್ಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
ಓದಿ : ಸ್ಮಾರ್ಟ್ ಸಿಟಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರಾಕೇಶ್ ಸಿಂಗ್ ತಾಕೀತು