ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ 22 ಕಟ್ಟಡಗಳನ್ನು ಬಿಡಿಎ ಏಕಾಏಕಿಯಾಗಿ ನೆಲಸಮಗೊಳಿಸಿದೆ. ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಿನ್ನೆಯಿಂದ ಆರಂಭಿಸಲಾಗಿದೆ.
ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ ಗ್ರಾಮಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸುಮಾರು 400ಕ್ಕೂ ಅಧಿಕ ಕಟ್ಟಡಗಳು ನಿಯಮ ಬಾಹಿರವಾಗಿ ತಲೆ ಎತ್ತಿದ್ದು ಇವುಗಳ ತೆರವಿಗೆ ಬಿಡಿಎ ಸಜ್ಜಾಗಿದೆ.ಪೊಲೀಸ್ ಭದ್ರತೆಯೊಂದಿಗೆ ತೆರವು ಮಾಡಲಾಗಿದೆ.
ಇತ್ತ ನಮ್ಮ ವಸ್ತುಗಳನ್ನು ಸಾಗಿಸುವುದಕ್ಕಾದರೂ ಅವಕಾಶ ಕೊಡಿ ಎಂದು ನಿವಾಸಿಗಳು ಕಣ್ಣೀರಿಟ್ಟ ಘಟನೆ ಸಹ ನಡೆದಿದೆ. ಕಂದಾಯ ನಿವೇಶನ ಖರೀದಿಸಿ, ಸರ್ಕಾರದ ಅನುಮತಿಯಿಂದ ಪ್ರಮಾಣಪತ್ರ ಪಡೆದರೂ ಕಟ್ಟಡಗಳ‌್ನು ಕೆಡವಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಪ್ರದೇಶಗಳಲ್ಲಿ 2018 ರ ಆಗಸ್ಟ್ 3 ರ ನಂತರ ನಿರ್ಮಿಸಲಾದ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಶೆಡ್‌ಗಳನ್ನು ತೆರವುಗೊಳಿಸಿದ್ದೇವೆ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ ತಿಳಿಸಿದ್ದಾರೆ.
ಉಪಗ್ರಹ ಚಿತ್ರಗಳನ್ನು ಆಧರಿಸಿ 2018ರ ನಂತರ ಕಟ್ಟಿದ ಕಟ್ಟಡಗಳನ್ನು ಗುರುತಿಸಿದ್ದೇವೆ. 2018ನಂತರ ಪ್ರತಿ ತಿಂಗಳೂ ಎಲ್ಲೆಲ್ಲ ಕಟ್ಟಡಗಳು ನಿರ್ಮಾಣವಾಗಿವೆ ಎಂಬುದನ್ನು ಪರಿಶೀಲಿಸಿದ್ದೇವೆ. ಇಲ್ಲಿ ಮನೆ ನಿರ್ಮಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕವೂ ಕೆಲವರು ಶೆಡ್‌ಗಳನ್ನು ನಿರ್ಮಿಸಿದ್ದರು. ಅಂತಹವರಿಗೆ ಹಿಂದೆಯೇ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿ ತಿಳಿಸಿದರು.