ಬೆಂಗಳೂರು: ನಾನು ಯಾರ ಖಾತೆಯನ್ನು ಯಾರಿಂದಲೂ ಕಿತ್ತು ಕೊಡಿ ಎಂದು ಕೇಳಿಲ್ಲ ಎಂದು ನೂತನ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ತಮಗೆ ನಿಗದಿಪಡಿಸಿರುವ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 406 ಅನ್ನು ಇಂದು ವೀಕ್ಷಿಸಲು ಬಂದಿದ್ದ ಬಿ.ಸಿ,ಪಾಟೀಲ್, ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಯಡಿಯೂರಪ್ಪನವರ ಬಳಿ ಹೆಚ್ಚುವರಿಯಾಗಿ ಇರುವ ಖಾತೆಗಳನ್ನೆ ಹಂಚಿಕೆ ಮಾಡಿ ಎಂದು ಕೇಳಿದ್ದೇವೆ ಎಂದರು.
ನಾನು ಪೊಲೀಸ್ ಅಧಿಕಾರಿಯಾಗಿದ್ದವನು. ಗೃಹ ಖಾತೆ ಕೊಟ್ಟರೆ ಸೂಕ್ತ ಎಂದು ಮಾಧ್ಯಮದವರು ಆಸೆಪಟ್ಟಿದ್ದಾರೆ ಹೊರತು ನಾನು ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ. ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ನಿನ್ನೆಯೇ ಕಚೇರಿ ಅಲರ್ಟ್ ಆಗಿತ್ತು. ವಿಕಾಸಸೌಧ ಮತ್ತು ವಿಧಾನಸೌಧ ವಾಸ್ತು ಪ್ರಕಾರನೇ ಇದೆ. ಕಚೇರಿ ಇಷ್ಟ ಆಯ್ತು ಎಂದ ಅವರು, ಸಚಿವ ರಮೇಶ್ ಜಾರಕಿಹೊಳಿ ನಮ್ಮ ನಾಯಕರಲ್ಲ. ಅವರು ನನ್ನ ಸ್ನೇಹಿತರು. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ , ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ನಮ್ಮ ನಾಯಕರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮಗೆ ಸುಪ್ರೀಂ ಕೋರ್ಟ್ ಕೂಡ ತೀರ್ಪು ಕೊಟ್ಟಿದೆ. ಚುನಾವಣೆಯಲ್ಲೂ ಗೆದ್ದಿದ್ದೇವೆ. ಜನತಾ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ಕೊಟ್ಟಿದೆ. ಕೋರ್ಟ್ ತೀರ್ಪಿಗೂ ಬೆಲೆ ಕೊಡಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ನಂಬಿಕೆ ಇಲ್ಲ ಎಂದರೆ ಅವರು ಎಂಥಾ ಕಾನೂನು ಪದವೀಧರರು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಯಾರಿಗೂ ಬೇಸರವಾಗಿಲ್ಲ. ಇಂದು ಎಂಟಿಬಿ ನಾಗರಾಜ್ರನ್ನು ಭೇಟಿಯಾಗುತ್ತೇನೆ. ಎಂಟಿಬಿ ನಾಗರಾಜ್ ಮತ್ತು ಹೆಚ್. ವಿಶ್ವನಾಥ್ ಅವರು ನಮ್ಮ ಜತೆ ಸಚಿವ ಸಂಪುಟಕ್ಕೆ ಬರಬೇಕಿತ್ತು. ಆದರೆ, ಸುಪ್ರಿಂಕೋರ್ಟ್ ತೀರ್ಪಿನ ಕಾರಣ ಸೋತವರಿಗೆ ಸಚಿವ ಸ್ಥಾನ ಕೊಡಲು ಕಾನೂನು ತೊಡಕಿದೆ. ಜೂನ್ನಲ್ಲಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಮಹೇಶ್ ಕುಮಟಳ್ಳಿ ಸೇರಿದಂತೆ ಎಲ್ಲರಿಗೂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ನಾವು 17 ಜನರೂ ಒಟ್ಟಾಗಿದ್ದೇವೆ ಎಂದು ಹೇಳಿದರು.
ಹೆಚ್ಡಿಕೆಗೆ ಟಾಂಗ್ : ಕುಮಾರಸ್ವಾಮಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವರು.ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಯಾಕೆ ಮಾತನಾಡಬೇಕು. ಕುಮಾರಸ್ವಾಮಿಯವರಿಗೆ ಬಿಜೆಪಿಗೆ ಬರುವ ಆಸೆ ಇದ್ದರೆ ಹೇಳಲಿ. ನಾನೇ ಅವರೊಂದಿಗೆ ಮಾತನಾಡಿ ಬಿಜೆಪಿಗೆ ಕರೆತರುತ್ತೇವೆ. ಕುಮಾರಸ್ವಾಮಿಯವರು ಮೊದಲು ತಮ್ಮ ಜೆಡಿಎಸ್ ಶಾಸಕರನ್ನು ಉಳಿಸಿಕೊಳ್ಳಲಿ. ಅವರಿಗೆ ಏಕೆ ಬಿಜೆಪಿ ಶಾಸಕರ ಬಗ್ಗೆ ಚಿಂತೆ ಎಂದು ಟಾಂಗ್ ನೀಡಿದರು.