ಬೆಂಗಳೂರು: ನಗರದಲ್ಲಿ ಮತ್ತೊಂದು ಅವೈಜ್ಞಾನಿಕ ಮೇಲ್ಸೇತುವೆ ನೆಲಸಮಗೊಳಿಸಲಾಗುತ್ತಿದೆ. ಕಾರಣಾಂತರಗಳಿಂದ ಐಒಸಿ ಬಳಿ ನಿರ್ಮಿಸಲಾಗಿರುವ ಮೇಲ್ಸೇತುವೆಯನ್ನು ನೆಲಸಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ಖಚಿತಪಡಿಸಿದ್ದಾರೆ. ಬಾಣಸವಾಡಿಯಿಂದ ಫ್ರೆಜರ್ ಟೌನ್‌ಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಫ್ಲೈ ಓವರ್ ತೆರವು ಮಾಡಿ ಹೊಸದಾಗಿ ಮತ್ತೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಿರಿದಾದ ಮೇಲ್ಸೇತುವೆ ನಿರ್ಮಾಣ ಮಾಡಿದ ನಂತರ ಈ ಭಾಗದ ರಸ್ತೆ ಸಂಚಾರಕ್ಕೆ ತೀವ್ರ ಆಡಚಣೆಯಾಗಿತ್ತು. ಇದರ ಜೊತೆಗೆ ಬೈಯಪ್ಪನಹಳ್ಳಿ ಸರ್.ಎಂ.ವಿ ಟರ್ಮಿನಲ್ ಆರಂಭಗೊಂಡ ನಂತರವಂತೂ ಇಲ್ಲಿನ ರಸ್ತೆ ಸಂಚಾರ ನರಕ ಸದೃಶ್ಯವಾಗಿ ಪರಿವರ್ತನೆಯಾಗಿತ್ತು. ಹೀಗಾಗಿ, ಅವೈಜ್ಞಾನಿಕ ಸೇತುವೆ ನೆಲಸಮಗೊಳಿಸಿ ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ರವೀಂದ್ರ ಹೇಳಿದ್ದಾರೆ.
ದ್ವಿಮುಖ ಸಂಚಾರ ವ್ಯವಸ್ಥೆ: ಮಾರುತಿ ಸೇವಾ ನಗರ, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿಗೆ ಸಂಚಾರ ಕಲ್ಪಿಸುವ ರೀತಿ ನಿರ್ಮಿಸಲಾಗುತ್ತಿರುವ ಹೊಸ ಮೇಲ್ಸೇತುವೆ ಮೇಲೆ ನಾಲ್ಕು ದಿಕ್ಕಿನಲ್ಲೂ ವಾಹನ ಸಂಚಾರಕ್ಕೆ ದ್ವಿಮುಖ ಸಂಚಾರದ ವ್ಯವಸ್ಥೆ ಕಲ್ಪಿಸಲಿದೆ. ವೃತ್ತಾಕಾರದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೊದನೆ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಕಟ್ಟಡ ಸುರಕ್ಷತೆ ನಿರ್ಲಕ್ಷಿಸಿದರೆ ಬಿಬಿಎಂಪಿಯಿಂದಲೇ ನೆಲಸಮ.. ಖಡಕ್ ಎಚ್ಚರಿಕೆ ನೀಡಿದ ಆಯುಕ್ತ
ಮುಂದಿನ ತಿಂಗಳಿನಿಂದಲೇ ಕಾಮಗಾರಿ: ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಭೂಮಿ ಬಿಟ್ಟುಕೊಡಲು ಸಮ್ಮತಿಸಿದೆ. ಇದರ ಜತೆಗೆ ರೈಲ್ವೆ ಇಲಾಖೆಯವರೊಂದಿಗೆ ಮಾತುಕತೆ ನಡೆಸಲಾಗಿದೆ. ರಾಜ್ಯ ಸರ್ಕಾರದ ಅನುಮತಿ ದೊರೆತರೆ ಮುಂದಿನ ತಿಂಗಳಿನಿಂದಲೇ ಕಾಮಗಾರಿ ನಡೆಸಲಾಗುತ್ತದೆ ಎಂದು ರವೀಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಮುಖ ಮೇಲ್ಸೇತುವೆಯಲ್ಲಿ ದೋಷ: ಬಿಬಿಎಂಪಿಯ ಆಡಿಟ್ ವರದಿಯಲ್ಲಿ ಬಹಿರಂಗ
ಸ್ಥಳೀಯರಿಂದ ಆಕ್ರೋಶ: ಬಿಬಿಎಂಪಿಯ ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ವ್ಯಾಪಕ ವಿರೋಧ ಇದ್ದರೂ ಕೋಟ್ಯಂತರ ರೂಪಾಯಿಗಳ ತೆರಿಗೆ ಹಣ ಬಳಸಿ ನಿರ್ಮಿಸಲಾಗಿದ್ದ ಸೇತುವೆಯನ್ನು ತೆರವುಗೊಳಿಸುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
ಇನ್ಫ್ರಾ ಸಪೋರ್ಟ್ ಸಂಸ್ಥೆಯಿಂದ ಸದೃಢತೆ ಪರೀಕ್ಷೆ : ಕಳೆದ ವರ್ಷ ಬಿಬಿಎಂಪಿ ಫ್ಲೈ ಓವರ್ ಗಳ ಸದೃಢತೆ ಪರೀಕ್ಷೆಗೆ ಇನ್ಫಾ ಸಪೋರ್ಟ್ ಎಂಬ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆಯು ಸೆಪ್ಟೆಂಬರ್ 25, 2022 ರಂದು ನಗರದ 42ರ ಪೈಕಿ 25 ಫ್ಲೈಓವರ್ಗಳ ಸದೃಢತೆ ಪರೀಕ್ಷೆ ನಡೆಸಿ ಪಾಲಿಕೆಗೆ ಅಂತಿಮ ವರದಿ ಸಲ್ಲಿಸಿದೆ. ಅದರಲ್ಲಿ ಫ್ಲೈ ಓವರ್‌ನಲ್ಲಿ ದೋಷವಿರುವುದು ದೃಢಪಟ್ಟಿದೆ. ಹೊರ ವರ್ತುಲ ರಸ್ತೆಯಲ್ಲಿರುವ ಸುಮ್ಮನಹಳ್ಳಿ ಫ್ಲೈಓವರ್‌ನ ಸ್ಲಾಬ್‌ಗಳಲ್ಲಿ ವೈಟ್ ಪ್ಯಾಚಸ್ (ನೆಲ ಹಾಸು ಕಾಂಕ್ರಿಟ್‌ನಲ್ಲಿ ದೋಷ) ಇದೆ ಎನ್ನಲಾಗಿತ್ತು. ಇದೀಗ ಮೈಸೂರು ರಸ್ತೆಯ ಸಿರ್ಸಿ ಫ್ಲೈ ಓವರ್ ನಲ್ಲಿ ಬಿರುಕುಗಳಿವೆ ಎಂಬ ಅಘಾತಕಾರಿ ಅಂಶ ವರದಿಯಲ್ಲಿ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು