ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳಿಂದಾಗುವ ಹಾವಳಿ ತಪ್ಪಿಸಲು, ಬೀದಿನಾಯಿಗಳಿಂದ ಜನರಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
2020-21ನೇ ಸಾಲಿನಲ್ಲಿ ಅಂದರೆ ಈವರೆಗೆ 53,800 ಬೀದಿ ನಾಯಿಗಳಿಗೆ ಹುಚ್ಚುರೋಗ ನಿರೋಧಕ ಲಸಿಕೆ (ರೇಬಿಸ್) ಹಾಕಲಾಗಿದೆ. ಅದಕ್ಕೂ ಮೊದಲು 2018-19ರಲ್ಲಿ 1,16,216, ಹಾಗೂ 2019-2020 ರಲ್ಲಿ 76,556 ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿತ್ತು.
ಪ್ರತಿ ವರ್ಷ ಬೀದಿನಾಯಿಗಳಿಗೆ ಈ ಲಸಿಕೆ ಹಾಕಲಾಗುತ್ತದೆ. ಈ ವರ್ಷ ಏಪ್ರಿಲ್ನಿಂದ ಜನವರಿವರೆಗೆ ರೇಬಿಸ್ ಲಸಿಕೆಗಾಗಿ ಪಾಲಿಕೆ 47,72,470 ರೂ. ಖರ್ಚು ಮಾಡಿದೆ. ಇನ್ನು ಬೀದಿನಾಯಿ ಅಥವಾ ಸಾಕು ನಾಯಿಗಳು ಕಚ್ಚಿದರೂ ಕಡ್ಡಾಯವಾಗಿ ಜನರು ರೇಬಿಸ್ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಖಾಸಗಿಯಾಗಿ 2 ಸಾವಿರ ಹಾಗೂ ತೀವ್ರ ಪೆಟ್ಟಾದಾಗ ಕೊಡುವ ಇಮ್ಯೂನೋಗ್ಲೋಬಲಿನ್ಗೆ 8 ಸಾವಿರ ರೂ. ಶುಲ್ಕವಿದ್ದು, ಬಿಬಿಎಂಪಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದರು.
ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಪಾಲಿಕೆಗೆ ಬರುತ್ತಿವೆ. 2019 - 20ನೇ ಸಾಲಿನಲ್ಲಿ 5,803 ದೂರುಗಳು ಬಂದಿದ್ದು, 20-21 ನೇ ಸಾಲಿನಲ್ಲಿ 3,027 ದೂರುಗಳು ಬಂದಿವೆ. ದೂರು ಬಂದ ತಕ್ಷಣ , ಬಿಬಿಎಂಪಿ ಸಿಬ್ಬಂದಿ ನಾಯಿಗಳನ್ನು ಹಿಡಿದು ರೇಬಿಸ್ ಲಸಿಕೆ ಅಥವಾ ಎಬಿಸಿ ಅಥವಾ ಖಾಯಿಲೆ ಬಂದ ನಾಯಿಗಳ ರಕ್ಷಣೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ಆಯುಕ್ತ ಶಶಿಕುಮಾರ್ ತಿಳಿಸಿದರು.
ಇನ್ನೊಂದು ಆತಂಕಕಾರಿ ವಿಚಾರ ಅಂದರೆ, ರೇಬಿಸ್ ಸೋಂಕು ಪರೀಕ್ಷೆಗೆ ಒಳಪಡಿಸಿದ ಬೀದಿ ನಾಯಿಗಳಲ್ಲಿ ಶೇ. 83 ರಷ್ಟು ಶ್ವಾನಗಳಿಗೆ ರೇಬಿಸ್ ಸೋಂಕಿನ ಲಕ್ಷಣ ಕಂಡುಬಂದಿದೆ. 8 ವಲಯಗಳ 172 ನಾಯಿಗಳ ಮೆದುಳಿನ ದ್ರವಯುಕ್ತ ಮಾದರಿಯನ್ನು ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ, ನಾಯಿಗಳನ್ನು ಹಿಡಿದು ರೇಬಿಸ್ ಚುಚ್ಚುಮದ್ದು ಹಾಕಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಬಡವರ್ಗವನ್ನು ಮತ್ತಷ್ಟು ಕುಗ್ಗಿಸಿದ ಕೋವಿಡ್ - ಲಾಕ್ಡೌನ್: ಬಾಲಕಾರ್ಮಿಕರ ಪ್ರಮಾಣದಲ್ಲಿ ಹೆಚ್ಚಳ!
ನಾಯಿ ಕಚ್ಚಿದರೆ ತಕ್ಷಣ ಆ ಭಾಗವನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಂಡು, ರೇಬಿಸ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಮನೆಯ ಸಾಕು ನಾಯಿಗೂ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕಬೇಕು. ರೋಗ ಖಚಿತವಾದರೆ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಅಥವಾ ನಿರ್ದಿಷ್ಟ ಆಸ್ಪತ್ರೆಯಲ್ಲಿ ಮಾತ್ರ ರೋಗಿಯನ್ನು ದಾಖಲು ಮಾಡಬೇಕು. ಇಲ್ಲವಾದರೆ ಬೇರೆಯವರಿಗೂ ಸೋಂಕು ಹರಡಲಿದೆ.
ಹೆಚ್ಚು ಜೊಲ್ಲು ಸುರಿಸುವುದು, ಗಾಳಿ-ನೀರಿಗೆ ಭಯ ಪಡುವುದು ರೇಬಿಸ್ ಖಾಯಿಲೆಯ ಲಕ್ಷಣಗಳಾಗಿವೆ.