ಬೆಂಗಳೂರು: ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿರುವ ಬಾಣಂತಿಯರಿಗೆ ಅಧಿಕಾರಿಗಳೇ ನೇರವಾಗಿ ಹಾಲು ಖರೀದಿಸಿ ವಿತರಿಸುವಂತೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಆಸ್ಪತ್ರೆಗಳಿಗೆ ಹಾಲು ಸರಬರಾಜು ಮಾಡುವ ಟೆಂಡರ್ನಲ್ಲಿ ಯಾರೂ ಭಾಗವಹಿಸದ ಕಾರಣ ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಜನನಿ ಸುರಕ್ಷಾ ಯೋಜನೆಯಲ್ಲಿ ಪೌಷ್ಟಿಕ ಆಹಾರ ವಿತರಿಸುವ ಯೋಜನೆ ಜಾರಿಗೆ ಬಂದ ಬಳಿಕ ಹಾಲು ನೀಡುವುದನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಆರಂಭಿಸಲು ಬಿಬಿಎಂಪಿ ಯೋಚಿಸಿದ್ದು, ಎರಡು ಬಾರಿ ಟೆಂಡರ್ ವಿಫಲವಾದ ಕಾರಣ ಅಧಿಕಾರಿಗಳೇ ಖರೀದಿಸಿ ನೀಡಲು ಕ್ರಮ ವಹಿಸುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಆದೇಶ ಹೊರಡಿಸಲು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ನಿರ್ಮಲಾ ಬುಗ್ಗಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ವರ್ಷಕ್ಕೆ ಎಲ್ಲಾ 32 ಆಸ್ಪತ್ರೆಗಳನ್ನು ಸೇರಿಸಿ ಹನ್ನೊಂದು ಸಾವಿರ ಹೆರಿಗೆ ಆಗಲಿವೆ ಎಂದು ಅಂದಾಜಿಸಿ, ಮೂವತ್ತು ಸಾವಿರ ಲೀಟರ್ ಹಾಲಿಗೆ ಹದಿನೈದು ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳೇ ಹಾಲು ಕಾಯಿಸಿ, ಬಾಣಂತಿಯರಿಗೆ ಎರಡು ಹೊತ್ತಿಗೆ 500 ಎಂಎಲ್ ಹಾಲು ನೀಡಲು ಪಾಲಿಕೆ ಕ್ರಮಕ್ಕೆ ಮುಂದಾಗಿದೆ.