ಬೆಂಗಳೂರು : ನಗರದಲ್ಲಿ ಹಳೆಯ, ಶಿಥಿಲಗೊಂಡಿರುವ ಕಟ್ಟಡಗಳು ಕುಸಿದು ಬೀಳುತ್ತಿರುವ ಪ್ರಕರಣ ಮರುಕಳಿಸುತ್ತಲೇ ಇದ್ದರೂ, ಬಿಬಿಎಂಪಿ ಮಾತ್ರ ಕ್ರಮ ಕೈಗೊಳ್ಳುವಲ್ಲಿ ನಿರಂತರ ವಿಫಲಗೊಂಡಿದೆ.
ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನಿನ್ನೆಯಷ್ಟೇ ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ 50 ವರ್ಷಕ್ಕೂ ಹಳೆಯ ಮೂರು ಮಹಡಿಯ ಕಟ್ಟಡ ನೆಲಕ್ಕುರುಳಿತ್ತು. ಇಂದು ಮತ್ತೆ ಒಟ್ಟು 18 ಮನೆಗಳಿರುವ ಕೆಎಂಎಫ್ ನ ಬಮೂಲ್ ಕ್ವಾಟ್ರಸ್ ಕಟ್ಟಡ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಿದ್ದು, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಇದೇ ರೀತಿ ಬೆಂಗಳೂರಿನಲ್ಲಿ ಇನ್ನೂ 194 ಕಟ್ಟಡ ಕುಸಿಯುವ ಹಂತದಲ್ಲಿವೆ ಎಂದು ಬಿಬಿಎಂಪಿ ಸರ್ವೇ ನಡೆಸಿತ್ತು. 2019 ನವೆಂಬರ್ ನಲ್ಲೇ ಸರ್ವೇ ಕಾರ್ಯ ಮಾಡಲಾಗಿತ್ತು. ಈ ಪೈಕಿ, 78 ಕಟ್ಟಡಗಳ ಮಾಲೀಕರಿಗೆ ಮಾತ್ರ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ಬಳಿಕ ಮಾಲೀಕರು ಒಂದೋ ರಿಪೇರಿ ಮಾಡಬೇಕು, ಇಲ್ಲವಾದಲ್ಲಿ ಪಾಲಿಕೆಯೇ ತೆರವು ಮಾಡಬೇಕು.
ಆದರೆ, ಬಿಬಿಎಂಪಿಯಿಂದ ಯಾವುದೇ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ. ಕಟ್ಟಡ ಬಿದ್ದ ಜಾಗವನ್ನು ಪಾಲಿಕೆ ವಶಕ್ಕೆ ಪಡೆದು ಮಾಲೀಕರ ವಿರುದ್ಧ ಕ್ರಮಕೈಗೊಂಡಿದಿಯೇ ಹೊರತು, ಮುನ್ನೆಚ್ಚರಿಕೆಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.
ಅಂಕಿ-ಅಂಶ
ಸ್ಥಳ | ವಲಯ ಶಿಥಿಲಕಟ್ಟಡಸಂಖ್ಯೆ | ನೋಟಿಸ್ ನೀಡಿದ ಸಂಖ್ಯೆ |
ಯಲಹಂಕ | 67 | 08 |
ಪೂರ್ವ | 53 | 33 |
ಪಶ್ಚಿಮ | 33 | 06 |
ದಕ್ಷಿಣ | 38 | 30 |
ಮಹದೇವಪುರ | 03 | 00 |
ಒಟ್ಟು | 194 | 77 |
ಬೊಮ್ಮನಹಳ್ಳಿ
ಬಿಳೇಕಹಳ್ಳಿ- ಎರಡು ಕಟ್ಟಡ
ಅರಕೆರೆ - ಒಂದು ಕಟ್ಟಡ
ಚಿಕ್ಕಲ್ಲಸಂದ್ರ- ಯಾರೂ ವಾಸಿಸುತ್ತಿಲ್ಲ
194 ವಾರ್ಡ್- ಸಹಾಯಕ ಕಂದಾಯ ಅಧಿಕಾರಿ ಕಚೇರಿ,ಸಮುದಾಯ ಭವನ
196 ವಾರ್ಡ್ - ಅಂಜನಾಪುರ
ರಾಜರಾಜೇಶ್ವರಿ ನಗರ
ಜಾಲಹಳ್ಳಿ ವಾರ್ಡ್- ಬಿಬಿಎಂಪಿ ಹೊಲಿಗೆ ಕೇಂದ್ರ, ಬಿಬಿಎಂಪಿ
ವ್ಯಾಯಾಮ ಶಾಲೆ- 4 ಕಟ್ಟಡಗಳು
ಜೆಪಿ ಪಾರ್ಕ್ ವಾರ್ಡ್- ಬಿಬಿಎಂಪಿ ಪಶು ವೈದ್ಯಕೀಯ ಕೇಂದ್ರ
ಕೊಟ್ಟಿಗೆಪಾಳ್ಯ- ಅಂಗನವಾಡಿ ಕೇಂದ್ರ ಸ್ಲಂ ಬೋರ್ಡ್ ಕಟ್ಟಡ
ಲಕ್ಷ್ಮಿದೇವಿನಗರ- ಗೊರಗುಂಟೆಪಾಳ್ಯ ಸರ್ಕಾರಿ ಪ್ರೈಮರಿ ಶಾಲೆ
ಹೆಚ್ ಎಂಟಿ- ಸರ್ಕಾರಿ ಪ್ರೌಢ ಶಾಲೆ
ಹೆಮ್ಮಿಗೆಪುರ- ನೀರಿನ ಟ್ಯಾಂಕ್
ಯಶವಂತಪುರ- ನಾಲ್ಕು ಕಟ್ಟಡ
ಆರ್. ಆರ್. ನಗರ- ಬಾಲಕೃಷ್ಣ ರಂಗಮಂದಿರ
ಲಗ್ಗೆರೆ ವಾರ್ಡ್- ರಾಜೀವ್ ಗಾಂಧಿ ಪ್ರೈಮರಿ ಶಾಲೆ
ಅನೇಕ ವಲಯಗಳಲ್ಲಿ ಸರ್ವೇ ಕಾರ್ಯವೇ ಸಂಪೂರ್ಣಗೊಂಡಿಲ್ಲ. ಇದೀಗ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ವಾಸ ಮಾಡ್ತಿರುವವರನ್ನು ಕೂಡಲೇ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ. ಕಟ್ಟಡಗಳ ಸದೃಢತೆ ಪರೀಕ್ಷೆಗೆ ಸ್ಟ್ರಕ್ಚರಲ್ ಆಡಿಟ್ ಗೆ ತಜ್ಞರನ್ನು ನೇಮಕ ಮಾಡಲು ಕೂಡ ನಿರ್ದೇಶನ ನೀಡಿದ್ದಾರೆ.
ಇದರ ವೆಚ್ಚವನ್ನು ಕಟ್ಟಡ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಎರಡು ವರ್ಷದ ಹಿಂದೆ ಸರ್ವೇ ಮಾಡಲಾಗಿತ್ತು. ಅವುಗಳನ್ನು ನೆಲಸಮ ಅಥವಾ ದುರಸ್ಥಿ ಮಾಡುವ ಕೆಲಸ ಎರಡು ವರ್ಷದ ಹಿಂದೆಯೇ ಆಗಬೇಕಿತ್ತು.
ಇದರ ಸ್ಥಿತಿ ಪರಿಶೀಲನೆ ಆಗಬೇಕಿದೆ. ಜೊತೆಗೆ ವಾಸಕ್ಕೆ ಯೋಗ್ಯ ಇಲ್ಲದ ಕಟ್ಟಡಗಳು, ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳ ಸರ್ವೇ ಮತ್ತೆ ನಡೆಸಿ, ಜನರನ್ನು ತೆರವು ಮಾಡಬೇಕಾಗುತ್ತದೆ. ಈ ಬಗ್ಗೆ ಆದೇಶ ಹೊರಡಿಸುತ್ತೇನೆ. ವಲಯ ಆಯುಕ್ತರ ಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದರು.
ಪೌರಕಾರ್ಮಿಕರ ಕಟ್ಟಡಗಳು ಇಪ್ಪತ್ತು ವರ್ಷದ ಹಿಂದೆಯೂ ಬಿದ್ದಿದ್ದವು. ಇಂತಹ ಘಟನೆಗಳು ಆಗೋದು ಸ್ವಾಭಾವಿಕ. ಇದಾಗದಂತೆ ಸಮಯಕ್ಕೆ ಸರಿಯಾಗಿ ಪತ್ತೆ ಮಾಡುವ ಕೆಲಸ ಆಗಬೇಕಿದೆ. ಈ ಬಗ್ಗೆ ಜಂಟಿ ಆಯುಕ್ತರ ತುರ್ತು ಸಭೆ ಕರೆಯಲಾಗುವುದು.
ಹಿಂದಿನ ವರದಿಯನ್ನು ಎರಡು ದಿನದಲ್ಲಿ ಒಪ್ಪಿಸಬೇಕು. ಜೊತೆಗೆ ದಕ್ಷಿಣ ವಲಯದಲ್ಲಿ ಘಟನೆ ನಡೆದಿರುವುದರಿಂದ ಸಂಪೂರ್ಣ ವಲಯದಲ್ಲಿ 30 ದಿನದೊಳಗೆ ಸರ್ವೇ ವರದಿ ಒಪ್ಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಓದಿ: ದತ್ತ ಪೀಠ ವಿಚಾರದಲ್ಲಿ ಹಿಂದೂಗಳ ನಂಬಿಕೆಗೆ ಹೈಕೋರ್ಟ್ ತೀರ್ಪು ಪೂರಕ : ಸಿ ಟಿ ರವಿ