ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಪಕ್ಷದಿಂದ ನಿಂತು ಗೆದ್ದಿರುವ ಪಾಲಿಕೆ ಸದಸ್ಯರಿಗೆ ಕೊಡಬೇಕು ಎಂದು ಬಿಜೆಪಿ ಬೆಂಗಳೂರು ನಗರ ಘಟಕ ವಕ್ತಾರ ಎನ್ ಆರ್ ರಮೇಶ್ ಆಗ್ರಹಿಸಿದ್ದಾರೆ.
ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಇದೇ ಡಿಸೆಂಬರ್ 30ಕ್ಕೆ ನಿಗದಿಯಾಗಿದ್ದು, ಯಾವುದೇ ಕಾರಣಕ್ಕೂ ಚುನಾವಣೆ ಮುಂದೆ ಹೋಗುವುದಿಲ್ಲ ಎಂದಿದ್ದಾರೆ. ಇನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ಹಿಂಬಾಲಿಸಿ ಬಿಜೆಪಿಗೆ ಬಂದಿರುವ ಪಾಲಿಕೆ ಸದಸ್ಯರು ಬೇಡಿಕೆ ಇಟ್ಟಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ಬೆಂಬಲಿಸಿ ಪಕ್ಷಕ್ಕೆ ಬಂದಿರುವ ಪಾಲಿಕೆ ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಕೊಡಬಾರದು. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದರು.
ಬಿಜೆಪಿ ಚಿಹ್ನೆಯಿಂದ ಗೆದ್ದು ಪಾಲಿಕೆಗೆ ಆಯ್ಕೆಯಾಗಿರುವ 102 ಸದಸ್ಯರಲ್ಲಿ 12 ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಯನ್ನು ನೀಡಬೇಕು. ಬೇಕಾದರೆ ಬೇರೆ ಪಕ್ಷದಿಂದ ಬಿಜೆಪಿಗೆ ಬಂದಿರುವ ಪಾಲಿಕೆ ಸದಸ್ಯರಿಗೆ ಸ್ಥಾಯಿ ಸಮಿತಿಯ ಸದಸ್ಯ ಸ್ಥಾನವನ್ನು ನೀಡಲಿ. ಅದು ಬಿಟ್ಟು ಅನರ್ಹ ಶಾಸಕರನ್ನು ಹಿಂಬಾಲಿಸಿರುವ ಪಾಲಿಕೆ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡುವುದಕ್ಕೆ ನನ್ನ ವಿರೋಧವಿದೆ ಎಂದಿದ್ದಾರೆ.
ಅಲ್ಲದೆ ಅಂತಹ ಸದಸ್ಯರಿಗೆ ಪಕ್ಷದಲ್ಲಿ ಸ್ಥಾನಮಾನ ಕೊಡುತ್ತೇವೆ ಎಂಬ ಯಾವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಾಗಲಿ, ಬಿಜೆಪಿಯಾಗಲಿ ಕೊಟ್ಟಿಲ್ಲ. ಅನರ್ಹ ಶಾಸಕರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಂದವರು ಈಗ ಅರ್ಹ ಬಿಜೆಪಿ ಶಾಸಕರಾಗಿದ್ದಾರೆ. ಅವರಿಗೆ ಬಿಜೆಪಿ ಸೂಕ್ತ ಸ್ಥಾನಮಾನ ನೀಡಿದೆ ಆದರೆ ಅವರ ಹಿಂಬಾಲಕರಿಗೆ ಸ್ಥಾನಮಾನ ನೀಡುತ್ತೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ ಎಂದು ಕಿಡಿಕಾರಿದರು.