ಬೆಂಗಳೂರು: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ ಉತ್ತಮ ಸೇವೆ ಒದಗಿಸಲು ಸೂಕ್ತ ಪ್ರಮಾಣದಲ್ಲಿ ಸಿಬ್ಬಂದಿ ನೇಮಕವಾಗಿರಬೇಕು. ಆದ್ರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಯು ಪೂರ್ಣ ಪ್ರಮಾಣದಲ್ಲಿ ನೇಮಕವಾಗಿದ್ದಾರಾ? ಅಥವಾ ಸಿಬ್ಬಂದಿ ಕೊರತೆ ಕಾಡುತ್ತಿದೆಯಾ? ಇಲ್ಲಿದೆ ಒಂದಿಷ್ಟು ಮಾಹಿತಿ.
ನಗರದ ಜನರಿಗೆ ಅಗತ್ಯ ಮೂಲ ಸೌಕರ್ಯಗಳು, ಆರೋಗ್ಯ ಸೇವೆಗಳನ್ನು ನೀಡುವ ಸ್ಥಳೀಯ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಈಗಿರುವ ಆರೋಗ್ಯ ಸಿಬ್ಬಂದಿ, ಕಚೇರಿ ನೌಕರರು ದುಪ್ಪಟ್ಟು ಕೆಲಸದ ಹೊರೆಯಿಂದ ಬೇಸತ್ತಿದ್ದಾರೆ. ಸಿಬ್ಬಂದಿ ಕೊರತೆ ಇರುವ ಕಡೆ ಹೊರಗುತ್ತಿಗೆಯಿಂದ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದ್ದರೂ ಕೂಡ ಇದು ಸಾಲುತ್ತಿಲ್ಲ ಎಂದು ಪಾಲಿಕೆ ಅಧಿಕಾರಿ-ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಇರುವ ಕೆಲಸದ ಮೇಲೆ ಹೆಚ್ಚಿನ ಹೊರೆ:
ಕೋವಿಡ್ ಬಳಿಕ ಬಿಬಿಎಂಪಿಯ ಎಲ್ಲಾ ಅಧಿಕಾರಿ-ಸಿಬ್ಬಂದಿ ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಅದರಲ್ಲೂ ವಾರ್ಡ್ ಹೆಲ್ತ್ ಇನ್ಸ್ಪೆಕ್ಟರ್ಸ್ಗಳ ಜವಾಬ್ದಾರಿ ದೊಡ್ಡದಿತ್ತು. ಈ ಮಧ್ಯೆ ಎರಡು-ಮೂರು ವಾರ್ಡ್ಗಳನ್ನು ಒಬ್ಬರೇ ನಿಭಾಯಿಸುತ್ತಾ ಬಂದಿದ್ದೇವೆ. ಇದು ಇರುವ ಕೆಲಸದ ಮೇಲೆ ಹೆಚ್ಚಿನ ಹೊರೆಯಾಗಿದೆ ಎಂದು ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಒಬ್ಬರು ತಿಳಿಸಿದರು.
ಮಹಾಮಾರಿ ಕೋವಿಡ್ ರಾಜ್ಯಕ್ಕೆ ಕಾಲಿಟ್ಟ ನಂತರ ಸೋಂಕು ದೃಢಪಟ್ಟವರ ಮಾಹಿತಿ ಕಲೆಹಾಕಿ ನಂತರ ಆಸ್ಪತ್ರೆಗೆ ದಾಖಲಿಸುವುದು, ಲಸಿಕೆ ವಿತರಣೆ ಇತ್ಯಾದಿ ಹೆಚ್ಚುವರಿ ಜವಾಬ್ದಾರಿಗಳಿಗೂ ಸಿಬ್ಬಂದಿ ಕೊರತೆಯಾಗಿದೆ. ಎರಡು-ಮೂರು ಜನರ ಕೆಲಸವನ್ನು ಒಬ್ಬರೇ ಮಾಡುತ್ತಿದ್ದೇವೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊರಗುತ್ತಿಗೆಯಿಂದ ಪಡೆದಿರುವ ಆರೋಗ್ಯ ಸಿಬ್ಬಂದಿ ಘನತ್ಯಾಜ್ಯ ಮುಂತಾದ ಕೆಲಸದಲ್ಲಿ ತೊಡಗಿದ್ದಾರೆ. ಆರೋಗ್ಯ ಅಧಿಕಾರಿಯಾಗಿ ಪಾಲಿಕೆ ಸಿಬ್ಬಂದಿಯೇ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಇನ್ನು ವಾರ್ಡ್ ರಸ್ತೆಗಳು, ಚರಂಡಿ, ಕಸ ನಿರ್ವಹಣೆ, ಮೊದಲಾದ ವಾರ್ಡ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇಂಜಿನಿಯರ್ಸ್, ಎಕ್ಸಿಕ್ಯೂಟಿವ್ ಸಿಬ್ಬಂದಿ ಕೊರತೆಯೂ ಇದೆ. ಅಲ್ಲದೇ ಕೇಂದ್ರ ಕಚೇರಿ ಸೇರಿದಂತೆ ವಲಯ ವಾರ್ಡ್ ಕಚೇರಿಗಳಲ್ಲೂ ಕ್ಲರ್ಕ್ ಹುದ್ದೆಗಳು ಖಾಲಿ ಇವೆ. ಇದರಿಂದ ಕಡತಗಳ ಪರಿಶೀಲನೆಯಲ್ಲಿ ವಿಳಂಬವಾಗುತ್ತಿದೆ ಎಂದು ಅಮೃತ್ ರಾಜ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಸಿಬ್ಬಂದಿ ಕೊರತೆ: ಆಮೆಗತಿಯಲ್ಲಿ ಸಾಗುತ್ತಿವೆ ಹು-ಧಾ ಮಹಾನಗರ ಪಾಲಿಕೆ ಕಾರ್ಯಗಳು
ಬಿಬಿಎಂಪಿಯಲ್ಲಿರುವ ಹತ್ತು ಸಾವಿರ ಸಿಬ್ಬಂದಿ ಕೊರತೆ ನೀಗಿಸಿವುದು ಸೇರಿದಂತೆ ಅನೇಕ ಬೇಡಿಕೆಗಳನ್ನಿಟ್ಟುಕೊಂಡು ಬಿಬಿಎಂಪಿ ಅಧಿಕಾರಿ-ಸಿಬ್ಬಂದಿ ಪ್ರತಿಭಟನೆ ಕೂಡ ನಡೆಸಿದ್ದರು.
ಆದರೆ ಈ ಬಗ್ಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರಿಸಿ, ಬಿಬಿಎಂಪಿಯ ಯಾವುದೇ ಕೆಲಸಕ್ಕೆ ಸಿಬ್ಬಂದಿ ಕೊರತೆಯಾಗಿಲ್ಲ. ಕೋವಿಡ್ ಕೆಲಸಗಳಿಗೆ ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಪಾಲಿಕೆ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.