ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಡಗಣೆ ವಿಚಾರ ಸಂಬಂಧ ಇಲ್ಲಿಯವರೆಗೂ ಕೇವಲ 107 ಆಕ್ಷೇಪಣೆ ಮಾತ್ರ ಬಂದಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್ ಕುಮಾರ್ ಹೇಳಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಕ್ಷೇಪಣೆ ಸಂಬಂಧ ನಗರಾಭಿವೃದ್ಧಿ ಇಲಾಖೆಯಿಂದಲೇ ಅಧಿಕೃತವಾಗಿ 107 ಅರ್ಜಿ ಮಾತ್ರ ಬಂದಿವೆ ಎಂದು ನುಡಿದರು.
ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ತೆರವು ವಿಚಾರ ಸಂಬಂಧ ಮುಖ್ಯ ಇಂಜಿನಿಯರ್ ಹಾಗೂ ಜಂಟಿ ಆಯುಕ್ತರಿಗೆ ಬ್ಯಾನರ್ ಇರಬಾರದು ಎಂದು ಹೇಳಲಾಗಿದೆ. ಇದನ್ನು ಎರಡರಿಂದ ಮೂರು ಬಾರಿ ಈ ಹಿಂದೆ ತಿಳಿಸಿದ್ದೇವೆ. ಬ್ಯಾನರ್ ಹಾಕಿರುವವರಿಗೆ 1 ಸಾವಿರ ರೂಪಾಯಿ ದಂಡ ಹಾಕಲಾಗುತ್ತೆ. ಕಾನೂನು ಮೀರಿ ಬ್ಯಾನರ್ ಹಾಕಿದರೆ ಬ್ಯಾನರ್ ತೆಗೆಯಲು ಬಿದ್ದ ಮೊತ್ತ ಸಂಗ್ರಹ ಅವರಿಂದಲೇ ಆಗಲಿದೆ. ಅಲ್ಲದೇ, 16 ಸಾವಿರ ಬ್ಯಾನರ್ ಕಳೆದ ವಾರ ತೆಗೆಯಲಾಗಿದೆ ಎಂದರು.
ಬಿಬಿಎಂಪಿಯಿಂದ ಜಿಲೆಟಿನ್ ಬಳಕೆ ಇಲ್ಲ: ಓಕಳಿಪುರಂ ಕೆಳಸೇತುವೆ ಜಿಲೆಟಿನ್ ಬಳಕೆ ಕುರಿತು ಪ್ರತಿಕ್ರಿಯಿಸಿ ನಗರದಲ್ಲಿ ಜಿಲೆಟಿನ್ ಬಳಸಬೇಕೆಂದರೆ ಪೊಲೀಸ್ ಇಲಾಖೆ ಒಪ್ಪಿಗೆ ಬೇಕು. ಸದ್ಯಕ್ಕೆ ಕೆಳ ಸೇತುವೆ ಕಾಮಗಾರಿಗೆ ರೈಲ್ವೆ ಇಲಾಖೆ ಜಿಲೆಟಿನ್ ಬಳಸುತ್ತಿದೆ ಎಂದು ತಿಳಿಸಲಾಗಿದೆ. ಆದರೆ, ಬಿಬಿಎಂಪಿಯಿಂದ ಜಿಲೆಟಿನ್ ಬಳಕೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಬಿಎಂಪಿ 2020ರ ಆ್ಯಕ್ಟ್ ಅನ್ವಯ ತೆರಿಗೆ ಖಾತೆಗೆ ಜಮೆ: ಬಿಬಿಎಂಪಿಗೆ ಮಾಲ್‌ಗಳಿಂದ ತೆರಿಗೆ ಬಾಕಿ ವಿಚಾರದ ಕುರಿತು ಮಾತನಾಡಿ, ಬಿಬಿಎಂಪಿ 2020ರ ಆ್ಯಕ್ಟ್ ಅನ್ವಯ ಖಾತೆಗೆ ಜಮೆ ಮಾಡಬೇಕು. ಯಾವ ರೀತಿ ಈ ಕಾನೂನನ್ನು ಜಾರಿಗೆ ತರಬೇಕು ಎಂದು ಬಿಬಿಎಂಪಿ ಕಾನೂನು ವಿಭಾಗ ಕೆಲಸ ಕೈಗೆತ್ತಿಕೊಂಡಿದೆ. ಸಮರ್ಪಕವಾಗಿ ಕಾನೂನು ಜಾರಿಗೆ ತರಲು ಕಾನೂನಾತ್ಮಕವಾದ ತಂತ್ರ ರೂಪಿಸುತ್ತಿದೆ. ಎರಡು ವಾರಗಳೊಳಗೆ ಚಾಲ್ತಿಗೆ ತರಲು ಸಿದ್ದತೆ ನಡೆಸಲಾಗುತ್ತಿದೆ. ಇದಾದ ನಂತರ ಬ್ಯಾಂಕ್ ಖಾತೆ ಜಮೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ದೀಪಕ್ ಹೇಳಿದರು.
ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮುಂದಾಗಬೇಕು: ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಬಿಬಿಎಂಪಿ ಅಧಿಕಾರಿಗಳು ತ್ವರಿತವಾಗಿ ಬಗೆಹರಿಸಲು ಮುಂದಾಗಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.
ನಗರದಲ್ಲಿಂದು ಪೂರ್ವ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ ನಿಮಿತ್ತ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ, ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಲಿದ್ದು, ಅದನ್ನು ತೆರವುಗೊಳಿಸಬೇಕು. ಸಂಬಂಧಪಟ್ಟ ವಾರ್ಡ್ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಹೊಯ್ಸಳ ನಗರ ವಾರ್ಡ್ 80ರಲ್ಲಿ ನಡೆಯುವ ವಾರ್ಡ್ ಸಮಿತಿ ಸಭೆಯ ನಡಾವಳಿಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ಮನವಿ ಮಾಡಿದರು. ವಾರ್ಡ್ ಸಮಿತಿಯ ನೋಡಲ್ ಅಧಿಕಾರಿಗಳಿಗೆ ಸಭೆ ನಡೆದ ಬಳಿಕ ಕಡ್ಡಾಯವಾಗಿ ವೆಬ್ಸೈಟ್ನಲ್ಲಿ ನಡಾವಳಿ ಹಾಕಲು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ: ಜಲಮಂಡಳಿಯಿಂದ ತೆಗೆದುಕೊಂಡಿದ್ದ ಕೆಲಸ ಪೂರ್ಣಗೊಂಡಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾಡಿಲ್ಲ. ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಮತ್ತು ಬಾಣಸವಾಡಿ ವಾರ್ಡ್ ಸಂ. 27 ಒಎಂಬಿಆರ್ ಲೇಔಟ್ 4 ಹಾಗೂ 6ನೇ ಕ್ರಾಸ್ ನಲ್ಲಿ ಜಲಮಂಡಳಿಯಿಂದ ರಸ್ತೆ ಹಾಳಾಗಿದ್ದು, ಅದನ್ನು ಕೂಡಲೇ ಸರಿಪಡಿಸಲು ಮನವಿ ಮಾಡಿದಾಗ ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಹೇಳಿದರು.
ಖಾಲಿ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಲು ಮನವಿ. ಈ ಪೈಕಿ ಸಂಬಂಧಪಟ್ಟ ಮಾಲೀಕರಿಂದ ಕಸ ತೆರವುಗೊಳಿಸಲು ಸೂಚನೆ ನೀಡಿ. ಕಸ ತೆರವುಗೊಳಿಸಿಲ್ಲವಾದರೆ ಪಾಲಿಕೆಯಿಂದಲೇ ತೆರವುಗೊಳಿಸಿ ಮಾಲೀಕರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.
ವಾರ್ಡ್ 60ರಲ್ಲಿ ಬೀದಿ ದೀಪ ಅಳವಡಿಸಿ: ವಿದ್ಯುತ್ ಅಭಿಯಂತರರು ಎಲ್ಲೆಲ್ಲಿ ಬೀದಿ ದೀಪಗಳಿಲ್ಲ ಎಂಬುದನ್ನು ಪರಿಶೀಲಿಸಿ ಕೂಡಲೇ ದೀಪಗಳನ್ನು ಅಳವಡಿಸಲು ಹೇಳಿದರು.
ಓದಿ: ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ತನಿಖೆಗೆ ಐದು ತಂಡ ರಚನೆ- ಪೊಲೀಸ್ ಆಯುಕ್ತ ಲಾಬೂರಾಮ್