ಬೆಂಗಳೂರು: ಎಣ್ಣೆ ಗಿರಣಿಗೆ ಪರವಾನಗಿ ನೀಡಲು ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳ ಕೈಗೆ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ಸಿಕ್ಕಿಬಿದ್ದಿದ್ದಾರೆ.
ದಾಸರಹಳ್ಳಿ ವಲಯ ಮಲ್ಲಸಂದ್ರ ಬಿಬಿಎಂಪಿ ಕಚೇರಿಯ ಹಿರಿಯ ಆರೋಗ್ಯಾಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ ಲಂಚ ಪಡೆದು ಸಿಕ್ಕಿಬಿದ್ದವರು. ಕೊರೊನಾ ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿ (ದೂರುದಾರರು) ಸ್ವಂತ ಉದ್ದಿಮೆ ನಡೆಸಲು ಮುಂದಾಗಿದ್ದರು. ದಾಸರಹಳ್ಳಿ ವಾರ್ಡ್ನಲ್ಲಿ ನಿಸರ್ಗ ನಿಧಿ ಎಣ್ಣೆ ಗಿರಣಿ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಪರವಾನಗಿ ಪಡೆಯಲು ಸ್ಥಳೀಯ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಓದಿ: ಚಿಕ್ಕೋಡಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಕೈದಿ ಮಹಾರಾಷ್ಟ್ರದಲ್ಲಿ ಸೆರೆ
ಈ ಸಂಬಂಧ ಪರವಾನಗಿ ನೀಡಲು ಪ್ರವೀಣ್ ಕುಮಾರ್ 12 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು 3 ಸಾವಿರ ರೂ. ಮುಂಗಡ ಹಣ ಪಡೆದಿದ್ದರು. ಈ ಬಗ್ಗೆ ಎಸಿಬಿಗೆ ದೂರುದಾರರು ದೂರು ನೀಡಿದ್ದರು. ನಿನ್ನೆ ಬಾಕಿ ಹಣ ಕೊಡುವ ನೆಪದಲ್ಲಿ, ಎಸಿಬಿ ಅಧಿಕಾರಿಗಳು ತೋಡಿದ ಹಳ್ಳಕ್ಕೆ ವಿ.ಆರ್. ಪ್ರವೀಣ್ ಕುಮಾರ್ ಬಿದ್ದಿದ್ದಾರೆ.