ಬೆಂಗಳೂರು: ಮನೆಗಳಿಂದ ನಿತ್ಯ ಹಸಿ ಕಸ ಮಾತ್ರ ಸಂಗ್ರಹ ಮಾಡುವ ಪ್ರತ್ಯೇಕ ಟೆಂಡರ್ ಜಾರಿಗೆ ಬಿಬಿಎಂಪಿ ಸಮ್ಮತಿ ನೀಡಿದೆ.
ಹೈಕೋರ್ಟ್ನಲ್ಲಿ ಕಸ ವಿಲೇವಾರಿ ಸಂಬಂಧ ಆಗಸ್ಟ್12 ರಂದು ವಿಚಾರಣೆ ನಡೆಯಲಿದ್ದು, ನ್ಯಾಯಾಂಗ ನಿಂದನೆಯಾಗಬಾರದೆಂಬ ಕಾರಣಕ್ಕೆ ತಕ್ಷಣದಲ್ಲೇ 45 ವಾರ್ಡ್ಗಳಲ್ಲಿ ಟೆಂಡರ್ದಾರರಿಗೆ ಕಾರ್ಯಾದೇಶ ನೀಡಲು ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತರು ನಡೆಸಿದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಇನ್ನು 105 ವಾರ್ಡ್ಗಳಲ್ಲಿ ಬಿಡ್ ದಾರರನ್ನು ಗುರುತಿಸಿ ಕಾರ್ಯಾದೇಶ ನೀಡುವುದು ಬಾಕಿ ಇತ್ತು. ಈ ಮಧ್ಯೆ ಮೇಯರ್ ಇಂದೋರ್ ಮಾದರಿಯ ಪ್ರಾಯೋಗಿಕ ಯೋಜನೆ ಜಾರಿಗೆ ಪ್ರಯತ್ನಿಸಿದ್ದರಿಂದ ಕಸ ವಿಲೇವಾರಿ ಯೋಜನೆ ಜಾರಿಯಾಗುವುದು ವಿಳಂಬವಾಗಿತ್ತು. ನಂತರ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿದ್ದರಿಂದ ಪಾಲಿಕೆಗೆ ಕೋರ್ಟ್ ಚಾಟಿ ಬೀಸಿದ್ದು, ಇದೀಗ ಟೆಂಡರ್ ಜಾರಿಗೆ ಪಾಲಿಕೆ ಕ್ರಮ ಕೈಗೊಂಡಿದೆ. 105 ವಾರ್ಡ್ ಗಳ ಗುತ್ತಿಗೆ ವಿಚಾರವೂ ಆಗಸ್ಟ್ 10ಕ್ಕೆ ನಡೆಯುವ ಕೌನ್ಸಿಲ್ ಮುಂದೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.