ಬೆಂಗಳೂರು : ನಗರದಲ್ಲಿ ಕೊರೊನಾದಿಂದಾಗಿ ಮೃತಪಟ್ಟರೆ ಅಥವಾ ಕೊರೊನಾ ಶಂಕಿತರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವ ಕುರಿತು ಬಿಬಿಎಂಪಿ ಗೈಡ್‌ಲೈನ್ ಹೊರಡಿಸಿದೆ.
ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ತಡವಾಗುತ್ತಿರುವ ಹಿನ್ನೆಲೆ, ಆಸ್ಪತ್ರೆಗಳಿಗೆ ಬಿಬಿಎಂಪಿ ಈ ಸೂಚನೆಗಳನ್ನು ನೀಡಿದೆ. ರೋಗಿಗಳು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಮೃತಪಟ್ಟರೆ ಪ್ರತ್ಯೇಕ ಗೈಡ್ಲೈನ್ಗಳನ್ನು ಪಾಲಿಸಲು ಪಾಲಿಕೆ ಸೂಚಿಸಿದೆ. ಕೊರೊನಾ ಶಂಕಿತರ ಮೃತದೇಹ ಮಾತ್ರ ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು. ಕೋವಿಡ್ ಪಾಸಿಟಿವ್ ರೋಗಿಗಳ ಮೃತದೇಹವನ್ನು ಪಾಲಿಕೆ ಆ್ಯಂಬುಲೆನ್ಸ್ಗೆ ನೀಡಿ ಸ್ಮಶಾನ ಅಥವಾ ವಿದ್ಯುತ್ ಚಿತಾಗಾರಕ್ಕೆ ಹಸ್ತಾಂತರಿಸಲು ಸೂಚಿಸಿದೆ.
ಕೊರೊನಾ ಪಾಸಿಟಿವ್ ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟರೆ
1) ತಕ್ಷಣ ಸಾವಿಗೆ ಕಾರಣದ ಸರ್ಟಿಫಿಕೇಟ್ (ಡೆತ್ ಸರ್ಟಿಫಿಕೇಟ್) ಆಸ್ಪತ್ರೆ ಕೊಡಬೇಕು. ಇದರಲ್ಲಿ ಕೋವಿಡ್ ಸ್ಟೇಟಸ್ ಹಾಗೂ ಇತರೆ ಖಾಯಿಲೆಗಳಿದ್ದರೆ ನಮೂದಿಸಿರಬೇಕು.
2) ಆಧಾರ್ ಕಾರ್ಡ್ ಅಥವಾ ಯಾವುದೇ ಪ್ರೂಫ್ ಐಡಿ ಕಾರ್ಡ್ ಆಸ್ಪತ್ರೆ ಸಂಗ್ರಸಿಟ್ಟಿರಬೇಕು.
3) ಕೋವಿಡ್ ಪಾಸಿಟಿವ್ ರಿಪೋರ್ಟ್ ಆಸ್ಪತ್ರೆ ಇಟ್ಟುಕೊಂಡಿರಬೇಕು.
4) ಆನ್ಲೈನ್ ಪೇಷೆಂಟ್ ಮ್ಯಾನೇಜ್ಮೆಂಟ್ ಪೋರ್ಟಲ್ನಲ್ಲಿ ರೋಗಿಯ ಸಾವಿನ ಕುರಿತು ದಾಖಲಿಸಬೇಕು.
5) ಸರ್ಕಾರದ ಸೂಚನೆ ಪ್ರಕಾರ ಮೃತದೇಹವನ್ನು ಪ್ಯಾಕ್ ಮಾಡಬೇಕು.
6)ಮೃತದೇಹವನ್ನು ವಿದ್ಯುತ್ ಚಿತಾಗಾರಕ್ಕೆ ಸಾಗಿಸಲು ಬಿಬಿಎಂಪಿ ಆ್ಯಂಬುಲೆನ್ಸ್ ಅಥವಾ ಶವಸಾಗಿಸುವ ವಾಹನಕ್ಕೆ ಪಿಪಿಇ ಕಿಟ್ ಹಾಕಿದ ಸಿಬ್ಬಂದಿ ಹಸ್ತಾಂತರಿಸಬೇಕು.
7) ಚಿತಾಗಾರದ ಸಿಬ್ಬಂದಿಗೆ ಪಿಪಿಇ ಕಿಟ್‌ನ ಬಿಬಿಎಂಪಿ ವಲಯ ಅಧಿಕಾರಿಗಳು ನೀಡಬೇಕು.
ಆಸ್ಪತ್ರೆಗೆ ದಾಖಲಾದ ಕೊರೊನಾ ಶಂಕಿತರು ಸಾವನ್ನಪ್ಪಿದ್ರೆ
1) ತಕ್ಷಣ ಡೆತ್ ಸರ್ಟಿಫಿಕೇಟ್ ನೀಡಬೇಕು
2) ಸಹಜ ಸಾವಾಗಿದ್ರೂ ನಿಗದಿತ ಕಾರಣ ಆಸ್ಪತ್ರೆಯು ಡೆತ್ ಸರ್ಟಿಫಿಕೇಟ್ನಲ್ಲಿ ತಿಳಿಸಿರಬೇಕು. ಮರಣದ ಬಳಿಕ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದ್ರೆ ಪ್ರತ್ಯೇಕ ಡೆತ್ ಸರ್ಟಿಫಿಕೇಟ್ ನೀಡಬೇಕು.
3)ರೋಗಿಗಳ ಗಂಟಲು ದ್ರವವನ್ನು ಕೂಡಲೇ ಪರೀಕ್ಷಿಸಬೇಕು
4) ಸರ್ಕಾರದ ಸೂಚನೆಯಂತೆ ಮೃತದೇಹ ಪ್ಯಾಕ್ ಮಾಡಿ, ಸ್ವಾಬ್ ಟೆಸ್ಟ್ ರಿಸಲ್ಟ್ಗೆ ಕಾಯದೆ ಸಂಬಂಧಿಕರಿಗೆ ಮೃತದೇಹ ನೀಡಬಹುದು. ಈ ವೇಳೆ ಕೂಡಲೇ ವಿದ್ಯುತ್ ಚಿತಾಗಾರ ಅಥವಾ ರುದ್ರಭೂಮಿಗೆ ಹಸ್ತಾಂತರಿಸಲು ತಿಳಿಸಬೇಕು. ಜೊತೆಗೆ ಬಿಬಿಎಂಪಿ ವಲಯ ಅಧಿಕಾರಿಗೂ ಸೂಚನೆ ನೀಡಬೇಕು. 5) ರಿಪೋರ್ಟ್ ಪಾಸಿಟಿವ್ ಬಂದ್ರೆ ಆಸ್ಪತ್ರೆ ಕೂಡಲೇ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರಬೇಕು. ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಬೇಕು.
ಮನೆಯಲ್ಲಿಯೇ ಕೋವಿಡ್ ಪಾಸಿಟಿವ್ ರೋಗಿ ಮೃತಪಟ್ಟರೆ
1) ಪಾಲಿಕೆಯ ಮೆಡಿಕಲ್ ಆಫೀಸರ್ ರೋಗಿಯ ಫೋಟೋ ತೆಗೆಯಬೇಕು.
2) ಕೋವಿಡ್ ಪಾಸಿಟಿವ್ ಸ್ಟೇಟಸ್ ಹಾಗೂ ಇತರೆ ಖಾಯಿಲೆಗಳ ಬಗ್ಗೆ ನಮೂದಿಸಿ, ಮೆಡಿಕಲ್ ಆಫೀಸರ್ ಡೆತ್ ಸರ್ಟಿಫಿಕೇಟ್ ನೀಡಬೇಕು.
3) ಆಧಾರ್ ಕಾರ್ಡ್ ಅಥವಾ ಇತರೆ ಐಡಿ ಕಾರ್ಡ್ ಸಂಗ್ರಹಿಸಿಡಬೇಕು
4) ಕೋವಿಡ್-19 ಪಾಸಿಟಿವ್ ರಿಪೋರ್ಟ್ ಕಲೆಕ್ಟ್ ಮಾಡಿಕೊಳ್ಳಬೇಕು.
5) ಬಿಬಿಎಂಪಿ ಮೃತದೇಹವನ್ನು ಪ್ಯಾಕ್ ಮಾಡಿಕೊಡಬೇಕು.
6) ಮೃತದೇಹವನ್ನು ವಿದ್ಯುತ್ ಚಿತಾಗಾರ ಅಥವಾ ಸ್ಮಶಾನಕ್ಕೆ ಪಾಲಿಕೆಯ ಆ್ಯಂಬುಲೆನ್ಸ್ನಲ್ಲಿ ಸಾಗಿಸಬೇಕು.
ಮನೆಯಲ್ಲಿ ಕೋವಿಡ್ ಶಂಕಿತರು ಮೃತಪಟ್ಟರೆ ಕೂಡಲೇ ಪಾಲಿಕೆ ಮೆಡಿಕಲ್ ಆಫೀಸರ್ ಸ್ಥಳಕ್ಕೆ ತೆರಳಿ ಫೋಟೋ ತೆಗೆದು, ಗಂಟಲು ದ್ರವ ಸಂಗ್ರಹಿಸಿ ಮೃತ ದೇಹವನ್ನು ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ನೀಡಬಹುದಾಗಿದೆ. ಎಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ಕೋವಿಡ್ ಸಾವಿನ ಬಗ್ಗೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಬೇಕು.
ಇನ್ನು, ಬೆಂಗಳೂರಿನ ಎಲ್ಲಾ ವಿದ್ಯುತ್ ಚಿತಾಗಾರಗಳು, ರುದ್ರಭೂಮಿಗಳಲ್ಲಿ ನಗರದ ಯಾವುದೇ ಭಾಗದ ಮೃತದೇಹ ತೆಗೆದುಕೊಂಡು ಬಂದ್ರೂ ನಿರಾಕರಿಸದೆ ಅಂತಿಮ ಸಂಸ್ಕಾರ ಮಾಡಬೇಕು. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರದಿಡಬೇಕು ಎಂದು ಬಿಬಿಎಂಪಿ ನಿರ್ದೇಶಿಸಿದೆ.