ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿಂಗಾರು ಮಳೆ ಇನ್ನೂ ಕೆಲದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುತ್ತಿದ್ದು, ವಿಪತ್ತು ನಿರ್ವಹಣೆಗಾಗಿ ವಾರ್ಡ್ಗೊಬ್ಬರಂತೆ ಎಲ್ಲಾ ಪಾಲಿಕೆ ಎಂಜಿನಿಯರ್ಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ವಾರ್ಡ್ಗಳಲ್ಲಿ ಎಂಜಿನಿಯರ್ಗಳನ್ನು ನಿಯೋಜಿಸುವಂತೆ ವಲಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಯ ಸಮಸ್ಯೆ, ಪಾದಚಾರಿ ಮಾರ್ಗ ದುರಸ್ತಿಪಡಿಸುವ ಜವಾಬ್ದಾರಿ, ವಿಪತ್ತು ನಿರ್ವಹಣೆ, ರಸ್ತೆ ಗುಂಡಿ, ಕಸದ ಸಲುವಾಗಿ ಪ್ರತಿ ವಾರ್ಡ್‌ನಲ್ಲೂ ಪ್ರತ್ಯೇಕವಾಗಿ ಒಬ್ಬೊಬ್ಬ ಎಂಜಿನಿಯರ್ಗೆ ಜವಾಬ್ದಾರಿ ನೀಡಲಾಗಿದೆ. ಬೆಸ್ಕಾಂ, ನಮ್ಮ ಮೆಟ್ರೋ, ಜಲಮಂಡಳಿ ಅಧಿಕಾರಿಗಳನ್ನು ಜೊತೆಗೂಡಿಸಿಕೊಂಡು ಯಾವುದೇ ಸ್ಥಳದಲ್ಲಿ ಸಮಸ್ಯೆಗಳಿದ್ದರೆ, ಅದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ನಡೆಯುತ್ತಿದೆ.
ರಸ್ತೆಯಲ್ಲಿ ನೀರು ನಿಲ್ಲದಂತೆ ನಿಗಾ: ರಸ್ತೆ ಮೇಲೆ ನೀರು ನಿಲ್ಲದಂತೆ ನಿಗಾ ವಹಿಸಲಾಗುತ್ತಿದೆ. ಜೋರು ಮಳೆಯಾಗುವ ಸಂದರ್ಭದಲ್ಲಿ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತಿದ್ದು, ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಲು ಶೋಲ್ಡರ್ ಡ್ರೈನ್ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.
ನಮ್ಮ ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸಮಸ್ಯೆ: ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಳವಡಿಸಿರುವ ತಾತ್ಕಾಲಿಕ ಬ್ಯಾರಿಕೇಡ್‌ಗಳಿಂದ ಕೆಲವೆಡೆ ಮಳೆ ನೀರು ನಿಲ್ಲುತ್ತಿದ್ದು, ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಮ್ಮ ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಲಾಗುತ್ತಿದೆ.
ಮಳೆ ನೀರು ನುಗ್ಗಿರುವ ಕುರಿತು ಸಮೀಕ್ಷೆ: ನಗರದಲ್ಲಿ ಮಳೆಯಿಂದಾದ ಅನಾಹುತಗಳ ಪಟ್ಟಿ ಸಿದ್ಧಪಡಿಸಿ ವಿವರ ಸಿದ್ಧಪಡಿಸಲಾಗುತ್ತಿದೆ. ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬುದನ್ನು ಗುರುತಿಸಿ ಪರಿಹಾರ ನೀಡುವ ಕೆಲಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎನ್ನುವುದರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
ಕೋಲ್ ಮಿಕ್ಸ್ ಬಳಸಿ ಗುಂಡಿ ಮುಚ್ಚುವ ಕಾರ್ಯ: ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಟೆಂಡರ್ ಪಕ್ರಿಯೆಗೆ ಚಾಲನೆ ನೀಡಲಾಗಿದೆ. ಸದ್ಯ ಕೋಲ್ ಮಿಕ್ಸ್ ಬಳಸಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಹೆಚ್ಚು ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಗೆ ಅಳವಡಿಸಿರುವ ಗೇಟ್ಗಳನ್ನು ಕೂಡಲೇ ತೆಗೆದು ನೀರು ಹರಿಬಿಡಲಾಗುತ್ತಿದೆ.
ಇದನ್ನೂ ಓದಿ: 4 ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಅನುದಾನವೆಷ್ಟು? ಸಂಪೂರ್ಣ ವಿವರ