ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದ ಮನೆ ಮಾಲೀಕರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದ್ದು, 29 ಕಟ್ಟಡಗಳ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದೆ.
ನಗರದಲ್ಲಿ ಮಳೆಯಿಂದ ಉಂಟಾದ ಅನಾಹುತ ಹಿನ್ನೆಲೆ, ಬಿಬಿಎಂಪಿ ರಾಜಕಾಲುವೆ, ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿತ್ತು. ಆದರೆ, ಕೆಲ ಕಟ್ಟಡ ಮಾಲೀಕರು ಬಿಬಿಎಂಪಿ ನಡೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ನೀಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಎದಿರೇಟು ನೀಡಿರುವ ಬಿಬಿಎಂಪಿ, ತನ್ನ ಅಭಿಪ್ರಾಯವೂ ಪಡೆಯಬೇಕೆಂದು ಹೈಕೋರ್ಟಿಗೆ ಕೇವಿಯಟ್ ಅರ್ಜಿ ಸಲ್ಲಿಸಿದೆ. ಇದರ ನಡುವೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅವರು ತಡೆ ಪಡೆದ 29 ಆಸ್ತಿಗಳ ವಿರುದ್ಧ ಕಾರ್ಯಾಚರಣೆಗೆ ಆದೇಶಿಸಿದ್ದಾರೆ.
ಹೈಕೋರ್ಟ್‌ಗೆ ಮೊರೆ ಹೋಗಿದ್ದ ಮಾಲೀಕರು: ಒತ್ತುವರಿ ತೆರವು ಕಾರ್ಯಾಚರಣೆಯ ವಿರುದ್ಧ 61 ಆಸ್ತಿ ಮಾಲೀಕರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕೇವಿಯಟ್ ಅರ್ಜಿ ಸಲ್ಲಿಸಲು ಆದೇಶಿಸಿದ್ದರು.
ಕರ್ನಾಟಕ ಭೂಕಂದಾಯ ಕಾಯ್ದೆ ಅನ್ವಯ ಆದೇಶ : ಇದೀಗ ಬೆಂಗಳೂರು ಪೂರ್ವ ತಹಶೀಲ್ದಾರ್ ಅವರ 29 ಆಸ್ತಿಗಳ ವಿರುದ್ಧ ಕರ್ನಾಟಕ ಭೂಕಂದಾಯ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 104 ರ ಪ್ರಕಾರ ಕ್ರಮಕೈಗೊಳ್ಳಲು ಆದೇಶಿಸಿದ್ದಾರೆ.
ಜೆಸಿಬಿಗಳ ಮೂಲಕ ಕಾರ್ಯಾಚರಣೆ : ಆದೇಶದನ್ವಯ ಶೀಘ್ರದಲ್ಲೇ ಮುನ್ನೇಕೊಳಲು ಗ್ರಾಮ ಮತ್ತು ಅಮಾನಿ ಬೆಳಂದೂರು ಖಾನೆ ಗ್ರಾಮ, ವರ್ತೂರು ಹೋಬಳಿ ವ್ಯಾಪ್ತಿಯಲ್ಲಿ ಜೆಸಿಬಿಗಳ ಮೂಲಕ ಬೃಹತ್ ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
31 ಮಾಲೀಕರಿಗೆ ಕೆಎಲ್‌ಆರ್ ಕಾಯ್ದೆಯ ಸೆಕ್ಷನ್ 104 ರ ಅನ್ವಯ ನೋಟಿಸ್: 31 ಮಾಲೀಕರಿಗೆ ಕೆಎಲ್‌ಆರ್ ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ಕಂದಾಯ ಇಲಾಖೆ ನೋಟಿಸ್ ನೀಡಿದ್ದು, ಸ್ವತಃ ತಾವೇ ತೆರವು ಮಾಡಿಕೊಳ್ಳುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಶಿಫಾರಸ್ಸು ಮಾಡಿದ್ದೇ ನಾನು: ಬಿಎಸ್ವೈ