ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಬಳಿಯ ಕಮಲಾನಗರದಲ್ಲಿ ಶಿಥಿಲಗೊಂಡಿದ್ದ ಬೃಹತ್ ಕಟ್ಟಡ ತೆರವು ವೇಳೆ ಅದು ಕುಸಿದು ಬಿದ್ದಿದೆ. ನಿನ್ನೆ ರಾತ್ರಿ ಇದರ ತಳಪಾಯ ಕುಸಿತದಿಂದಾಗಿ ಕುಸಿಯುವ ಹಂತಕ್ಕೆ ತಲುಪಿತ್ತು. ಇಂದು ತೆರವು ಕಾರ್ಯಾಚರಣೆ ವೇಳೆ ಪಕ್ಕದ ಕಟ್ಟಡಕ್ಕೂ ಹಾನಿಯಾಗಿದ್ದು, ಆ ಕಟ್ಟಡ ತೆರವಿಗೂ ನೋಟಿಸ್ ನೀಡಲಾಗಿದೆ.
ಬೆಳಗ್ಗೆಯೇ ಕಟ್ಟಡ ತೆರವಿಗೆ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಇಡೀ ಕಟ್ಟಡ ಕುಸಿದು ಬಿದ್ದಿದ್ದು, ಪಕ್ಕದ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಮೊದಲೇ ನೋಟಿಸ್ ನೀಡಲಾಗಿದ್ದ ಕಟ್ಟಡ ನಿನ್ನೆ ರಾತ್ರಿ ವಾಲಿಕೊಂಡಿತ್ತು. ಕಟ್ಟಡದಲ್ಲಿ ವಾಸವಿದ್ದ ಕುಟುಂಬಸ್ಥರನ್ನು ಖಾಲಿ ಮಾಡಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ ಇಂದು ತೆರವು ಕಾರ್ಯಾಚರಣೆ ವೇಳೆ ಮತ್ತೊಂದು ಕಟ್ಟಡಕ್ಕೆ ಹಾನಿಯಾಗಿದ್ದು, ಆ ಕಟ್ಟಡ ತೆರವಿಗೂ ನೋಟಿಸ್ ನೀಡಲಾಗಿದೆ.