ಬೆಂಗಳೂರು: ನಗರದ ಪೂರ್ವ ವಲಯದ ವಸಂತನಗರ ವಾರ್ಡ್ ಮಿಲ್ಲರ್ಸ್ ರಸ್ತೆಯಲ್ಲಿರುವ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು (ಒಪಿಡಿ) ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿದ್ದಾರೆ.
ಸರ್ಕಾರದ ಅದೇಶದಂತೆ ಕೊರೊನ ಸೋಂಕಿತರಿಗೆ ಪಾಲಿಕೆ ವತಿಯಿಂದ ಕಾಯ್ದಿರಿಸಲಾದ ಹಾಸಿಗೆಗಳಿಗೆ ಮುಂಗಡ ಹಣವನ್ನು ಪಡೆಯುತ್ತಿದ್ದರು. ಸೋಂಕಿತರನ್ನು ದಾಖಲಿಸಿಕೊಳ್ಳಲು 4 ರಿಂದ 5 ಗಂಟೆ ಕಾಯಿಸುತ್ತಿದ್ದರು ಎಂಬ ದೂರ ಸಹ ಬಂದಿತ್ತು. ನಿನ್ನೆ ಬಿಬಿಎಂಪಿ ಜಂಟಿ ಆಯುಕ್ತರಾದ ಪಲ್ಲವಿ ನೇತೃತ್ವದ ತಂಡ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಹೊರ ರೋಗಿಗಳ ವಿಭಾಗವನ್ನು (ಒಪಿಡಿ) ಮುಚ್ಚಿಸಿದೆ.
ಪಾಲಿಕೆ ವತಿಯಿಂದ ಬಿಯು ಸಂಖ್ಯೆ ನೀಡಿ ಕಳಿಸುವ ಕೋವಿಡ್ ಸೋಂಕಿತರಿಂದಲೂ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಹಣ ಪಡೆಯುತ್ತಿದ್ದರು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿಯಾದ ಹಿರಿಯ ಅಧಿಕಾರಿ ಮೊಹಮದ್ ಮೊಹಿಸಿನ್ ಹಾಗೂ ಪೂರ್ವ ವಲಯ ಸಂಯೋಜಕರಾದ ಮನೋಜ್ ಕುಮಾರ್ ಮೀನಾ ನಿನ್ನೆ ಆಸ್ಪತ್ರೆ ಮೇಲ್ವಿಚಾಕರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಆದರೂ ಸೋಂಕಿತರಿಂದ ಹಣ ವಸೂಲಿ ಮಾಡುತ್ತಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಅಧಿಕಾರಿಗಳು ಇಂದು ಮಹಾವೀರ್ ಜೈನ್ಆಸ್ಪತ್ರೆಯ ಒಪಿಡಿ ಸೀಲ್ ಮಾಡಿದ್ದಾರೆ. ಕೊರೊನ ರೋಗಿಗಳಿಂದ ಹಣ ವಸೂಲಿ ಮಾಡುವುದು ಮುಂದುವರಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಅದರಂತೆ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ 75 ಹಾಸಿಗೆಗಳನ್ನು ನೀಡಬೇಕಿತ್ತು. ಆದರೆ, ಅವರು ಇದುವರೆಗೆ 15 ಮಂದಿಯನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ಹೀಗಾಗಿ, ಆಸ್ಪತ್ರೆಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ ಎಂದು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ತಿಳಿಸಿದ್ದಾರೆ.