ಬೆಂಗಳೂರು: ನಗರದಲ್ಲಿ ಸರ್ಕಾರಿ ಆದೇಶದಂತೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ.50ರಷ್ಟು ಹಾಸಿಗೆ ನೀಡದ ಬಿಬಿಎಂಪಿಯ ದಕ್ಷಿಣ ವಲಯ ವ್ಯಾಪ್ತಿಯ 19 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಬೆಡ್ ನೀಡದೆ ಕಳ್ಳಾಟ ಆಡುತ್ತಿದ್ದ ಖಾಸಗಿ ಆಸ್ಪತ್ರೆಗಳಲ್ಲಿನ 712 ಹಾಸಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಸರ್ಕಾರದ ಅದೇಶ ಉಲ್ಲಂಘನೆ ಮಾಡಿದ್ದ ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನೂ ತಾತ್ಕಾಲಿಕವಾಗಿ ರದ್ದು ಮಾಡಿ ಆಸ್ಪತ್ರೆಗಳ ಮುಂದೆ ಬ್ಯಾನರ್ ಕಟ್ಟಿದ್ದಾರೆ.
ಬಿಬಿಎಂಪಿಯ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡ ಬಿಬಿಎಂಪಿಯ ದಕ್ಷಿಣ ವಲಯದ 5 ವಿಧಾನಸಭಾ ಕ್ಷೇತ್ರಗಳ 19 ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ದಾಳಿ ವೇಳೆ ರಾಜ್ಯ ಸರ್ಕಾರದ ಆದೇಶದಂತೆ ಕೊರೊನಾ ಸೊಂಕಿತರಿಗೆ ಬೆಡ್ಗಳನ್ನು ಮೀಸಲಿಡದೆ ಇರುವುದು ಗಮನಕ್ಕೆ ಬಂದ ಹಿನ್ನೆಲೆ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರ ಈಗಾಗಲೇ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕೊರೊನಾ ರೋಗಿಗಳಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಶೇ.50 ರಷ್ಟು ಹಾಸಿಗೆಯನ್ನು ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿತ್ತು. ಅಲ್ಲದೆ ಬಿಬಿಎಂಪಿ ಕೂಡ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇಷ್ಟಾದರೂ ಸರ್ಕಾರದ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಈ ಕ್ರಮ ಜರುಗಿಸಿದ್ದಾರೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದ 4 ಆಸ್ಪತ್ರೆಗಳಿಂದ 114, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ 4 ಆಸ್ಪತ್ರೆಗಳಿಂದ 54 ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 3 ಆಸ್ಪತ್ರೆಗಳಿಂದ 104, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ 5 ಆಸ್ಪತ್ರೆಗಳಿಂದ 155, ಹಾಸಿಗೆಗಳನ್ನು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ 4 ಆಸ್ಪತ್ರೆಗಳಿಂದ 285, ಬೆಡ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಲಯದ ಆರೋಗ್ಯಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.